ಮುಲ್ಲನಪುರ, ಚಂಡೀಗಡ:ಶನಿವಾರ ನಡೆದ ಮತ್ತೊಂದು ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ಎದುರು 6 ವಿಕೆಟ್ಗಳ ಅಂತರದ ಗೆಲುವು ದಾಖಲಿಸಿತು.ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 219 ರನ್ ಗಳಿಸಿತು. 220 ರನ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡವು
18.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 223 ರನ್ ಬಾರಿಸಿ ಗೆಲುವು ಸಾಧಿಸಿತು.ನಾಯಕ ಶ್ರೇಯಸ್ ಅಯ್ಯರ್ 5 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹೀತ 33 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿ ಗೆಲುವಿನ ರುವಾರಿಯಾದರು. ಆರಂಭಿಕ ಜೋಡಿ ಪ್ರಿಯಾಂಶ್ ಆರ್ಯ (57; 20ಎ) ಮತ್ತು ಪ್ರಭಸಿಮ್ರನ್ ಸಿಂಗ್ (51; 25ಎ) ಮೊದಲ ವಿಕೆಟ್ ಜತೆಯಾಟದಲ್ಲಿ 37 ಎಸೆತಗಳಲ್ಲಿ 99 ರನ್ ಸೇರಿಸಿದರು. ನಾಲ್ಕನೇ ಪಂದ್ಯವಾಡಿದ ಪಂಜಾಬ್ ತಂಡಕ್ಕೆ ಇದು ಮೂರನೇ ಜಯ. ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಸ್ಫೋಟಕ ಆರಂಭ ಒದಗಿಸಿದರು.18 ಎಸೆತಗಳಲ್ಲಿ ಅರ್ಧಶತಕ ದಾಟಿದ ಅಭಿಷೇಕ್ 28 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗು ಐದು ಬೌಂಡರಿಗಳನ್ನು ಒಳಗೊಂಡು 74 ರನ್ ಸೂರೆ ಮಾಡಿದರು. ಇನ್ನೊಂದೆಡೆ ಹೆಡ್ 23 ಎಸೆತಗಳಲ್ಲಿ 38 ರನ್ ಹೊಡೆದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 8.1 ಓವರ್ಗಳಲ್ಲಿ 120 ರನ್ ಕಲೆಹಾಕಿದರು. ನಾಯಕ ಇಶಾನ್ ಕಿಶನ್ (27; 17ಎ) ಮತ್ತು ಹೆನ್ರಿಚ್ ಕ್ಲಾಸೆನ್ (39; 33ಎ) ಅವರು ತಂಡದ ಮೊತ್ತವು ಹೆಚ್ಚಲು ಕಾಣಿಕೆ ನೀಡಿದರು.














