ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೊದಲ 16 ದಿನಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ 20 ಪಂದ್ಯಗಳು ನಡೆಯಲಿವೆ.ಮಾರ್ಚ್ 28ರಂದು ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು
ಸನ್ರೈಸರ್ಸ್ ಮುಖಾಮುಖಿಯಾಗಲಿವೆ. ಒಟ್ಟು 84 ಪಂದ್ಯಗಳು ನಡೆಯಲಿದ್ದು ಮೇ.31ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಅವುಗಳ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಚುನಾವಣೆ ದಿನಾಂಕಗಳು ಪ್ರಕಟವಾದ ನಂತರ ಆಯಾ ರಾಜ್ಯಗಳ ಕ್ರೀಡಾಂಗಣಗಳಲ್ಲಿ ನಿಗದಿಯಾಗಿರುವ ಪಂದ್ಯಗಳನ್ನು ಬೇರೆಡೆ ಸ್ಥಳಾಂತರಿಸುವ ಸಾಧ್ಯತೆಗಳೂ ಇವೆ.ಪಶ್ಚಿಮ ಏಷ್ಯಾದಲ್ಲಿ ನಡೆದಿರುವ ಯುದ್ಧದಿಂದಾಗಿ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಇರುವ ದೋಹಾ ಮತ್ತು ದುಬೈಗಳಲ್ಲಿ ವಿಮಾನಯಾನವೂ ಅಸ್ತವ್ಯಸ್ತವಾಗಿದೆ. ಆದ್ದರಿಂದ ವಿದೇಶಿ ಆಟಗಾರರು ಐಪಿಎಲ್ ಟೂರ್ನಿಗೆ ಆಗಮಿಸುವ ಕುರಿತು ಗೊಂದಲಗಳು ಮೂಡಿವೆ.
‘ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಆಟಗಾರರಿಗೆ ಮರಳಿ ತಮ್ಮ ತವರಿಗೆ ಹೋಗಲು ಇನ್ನೂ ಸಾಧ್ಯವಾಗಿಲ್ಲ. ಅವರನ್ನು ಸುರಕ್ಷಿತವಾಗಿ ಕಳಿಸಲು ಬುಧವಾರದಿಂದ ಐಸಿಸಿಯು ವ್ಯವಸ್ಥೆ ಮಾಡಿದೆ. ಆ ತಂಡಗಳಲ್ಲಿರುವ ಐಪಿಎಲ್ ಆಟಗಾರರು ಸರಿಯಾದ ಸಮಯಕ್ಕೆ ಮತ್ತೆ ಇಲ್ಲಿಗೆ ಬರುವುದು ಕಷ್ಟವಾಗಲಿದೆ’ ಎಂದು ತಂಡದ ಮೂಲಗಳು ತಿಳಿಸಿವೆ.
ಟೂರ್ನಿಯ ಎರಡನೇ ಪಂದ್ಯವು ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.
‘ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರಿನಂಗಳದಲ್ಲಿ ಐದು ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯಗಳನ್ನು ರಾಯಪುರದಲ್ಲಿ ಆಡಲಿದೆ. ಪಂಜಾಬ್ ಕಿಂಗ್ಸ್ ತಂಡವು ತನ್ನ ತವರು ಹೊಸ ಚಂಡೀಗಡದಲ್ಲಿ ನಾಲ್ಕು ಮತ್ತು ಧರ್ಮಶಾಲಾದಲ್ಲಿ ಮೂರು ಪಂದ್ಯಗಳನ್ನು ಆಡಲಿದೆ. ರಾಜಸ್ಥಾನ ರಾಯಲ್ಸ್ ಗುವಾಹಟಿಯಲ್ಲಿ ಮೂರು ಮತ್ತು ಜೈಪುರದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಪಂದ್ಯಗಳು ಮಧ್ಯಾಹ್ನ 3.30ಕ್ಕೆ ಹಾಗೂ ರಾತ್ರಿ 7.30ಕ್ಕೆ ಆರಂಭವಾಗಲಿವೆ’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.









