ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಸರಣಿಯಲ್ಲಿ ಭಾರತವು 1–2 ಅಂತರದಲ್ಲಿ ಹಿನ್ನಡೆಯಲ್ಲಿದೆ. ಇದರಿಂದ ಸರಣಿ ಜಯದ ಕನಸು ಜೀವಂತವಾಗುಳಿಯಲು ನಾಲ್ಕನೇ ಪಂದ್ಯದಲ್ಲಿ ಜಯಿಸಲೇಬೇಕಾದ
ಒತ್ತಡದಲ್ಲಿದೆ. ಗಾಯಗೊಂಡ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಈ ಪಂದ್ಯದಲ್ಲಿ ಆಡುವುದಿಲ್ಲ. ವೇಗಿ ಆಕಾಶ್ ದೀಪ್ ಕೂಡ ತೊಡೆಸಂಧು ನೋವಿನಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ತಂಡದಲ್ಲಿ ಕೆಲ ಬದಲಾವಣೆಗಳು ಮಾಡುವ ಸಾಧ್ಯತೆ ಇದೆ. ವೇಗದ ಬೌಲರ್ ಅನ್ಷುಲ್ ಕಂಬೋಜ್ ಅವರು ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಅನ್ಷುಲ್ ಜೊತೆಗೂಡಬಹುದು.
ಹರಿಯಾಣದ 24 ವರ್ಷದ ಅನ್ಷುಲ್ ಅವರು ಹೋದ ವರ್ಷದ ರಣಜಿ ಟ್ರೋಫಿ ಪಂದ್ಯದಲ್ಲಿ ಕೇರಳ ವಿರುದ್ಧದ ಒಂದು ಇನಿಂಗ್ಸ್ನಲ್ಲಿ (49ಕ್ಕೆ10) ಮಿಂಚಿದ್ದರು. ಭಾರತ ಎ ತಂಡದಲ್ಲಿ ಆಡಿದ್ದ ಅವರು ಭರವಸೆ ಮೂಡಿಸಿದ್ದರು. ಆದರೆ ಒಂದೊಮ್ಮೆ ಗಿಲ್ ಅವರು ಅನುಭವಿ ಪ್ರಸಿದ್ಧಕೃಷ್ಣ ಅವರ ಆಯ್ಕೆಗೆ ಒತ್ತುಕೊಟ್ಟರೆ ಅನ್ಷುಲ್ ಪದಾರ್ಪಣೆ ಸಾಧ್ಯವಾಗಲಿಕ್ಕಿಲ್ಲ.ಓಲ್ಡ್ ಟ್ರಾಫರ್ಡ್ನಲ್ಲಿ ಇದುವರೆಗೂ ಭಾರತ ತಂಡವು ಒಂದು ಬಾರಿಯೂ ಟೆಸ್ಟ್ ಪಂದ್ಯ ಗೆದ್ದಿಲ್ಲ. ಇಲ್ಲಿ ಇದುವರೆಗೆ ಉಭಯ ತಂಡಗಳು 9 ಸಲ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ತಂಡವು ನಾಲ್ಕು ಪಂದ್ಯ ಸೋತಿದೆ. ಐದು ಪಂದ್ಯಗಳು ಡ್ರಾ ಆಗಿವೆ.
ಇಲ್ಲಿಯ ವಾತಾವರಣ ಮತ್ತು ಪಿಚ್ ಸ್ಥಿತಿ–ಗತಿ ಅವಲೋಕಿಸಿ ಶಾರ್ದೂಲ್ ಠಾಕೂರ್ ಅಥವಾ ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸುವ ಕುರಿತು ನಿರ್ಧರಿಸಬಹುದು.
ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತ ತಂಡವು ಸರಣಿಯುದ್ದಕ್ಕೂ ಉತ್ತಮವಾಗಿ ಆಡಿದೆ. ಎಜ್ಬಾಸ್ಟನ್ನಲ್ಲಿ ಅಮೋಘ ಜಯ ಸಾಧಿಸಿತ್ತು. ಉಳಿದ ಎರಡೂ ಪಂದ್ಯಗಳಲ್ಲಿಯೂ ಕಠಿಣ ಪೈಪೋಟಿ ಒಡ್ಡಿಯೂ ಸೋತಿತ್ತು. ಸತತ ವಿಕೆಟ್ಗಳ ಪತನ ಕಾಣುವ, ಫೀಲ್ಡಿಂಗ್ನಲ್ಲಿ ಲೋಪ ಮತ್ತು ಬೌಲರ್ಗಳು ರನ್ ನಿಯಂತ್ರಿಸುವಲ್ಲಿ ಗಮನ ಹರಿಸಬೇಕಿದೆ. ಪಂದ್ಯ ಆರಂಭ ಅ.3.30ರಿಂದ





