ಇಂದೋರ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾಗೆ 400 ರನ್ಗಳ ಬೃಹತ್ ಗೆಲುವಿನ ಗುರಿ ನೀಡಿದೆ.ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 399 ರನ್ಗಳಿಸಿದೆ.ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲಬೇಕಾದರೆ
50 ಓವರ್ಗಳಲ್ಲಿ 400 ರನ್ಗಳಿಸಬೇಕಿದೆ.ಭಾರತದ ಪರ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಬಿರುಸಿನ ಆಟವಾಡಿ ಭರ್ಜರಿ ಶತಕ ಬಾರಿಸಿದರು. ಕೆ.ಎಲ್.ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಪೋಟಕ ಅರ್ಧ ಶತಕ ಸಿಡಿಸಿ ಬೃಹತ್ ಸ್ಕೋರ್ ದಾಖಲಿಸಲು ನೆರವಾದರು.
ಶುಭಮನ್ ಗಿಲ್ 97 ಎಸೆಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸ್ತ್ ನೆರವಿನಿಂದ 104 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 90 ಎಸೆಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 105 ರನ್ ಗಳಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆಗಳಲ್ಲಿ 6 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 72 ರನ್ ರನ್ ಚಚ್ಚಿದರು. ನಾಯಕನ ಆಟ ಪ್ರದರ್ಶಿಸಿದ ಕೆ.ಎಲ್.ರಾಹುಲ್ 38 ಎಸೆಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ52 ರನ್ ಬಾರಿಸಿದರು. ರಿತುರಾಜ್ ಗಾಯಕ್ವಾಡ್ 8 ರನ್ ಗಳಿಸಿದರೆ, ಇಶಾನ್ ಕಿಸನ್ 18 ಎಸೆತಗಳಲ್ಲಿ ತಲಾ ಎರಡು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 31 ರನ್ ಗಳಿಸಿದರು.ರವೀಂದ್ರ ಜಡೇಜ ಅಜೇಯ 13 ರನ್ ಗಳಿಸಿದರು.
ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಎರಡನೇ ವಿಕೆಟ್ಗೆ 164 ಎಸೆತಗಳಲ್ಲಿ 200 ರನದ ಜೊತೆಯಾಟ ನಡೆಸಿದರು. ರಾಹುಲ್ ಹಾಗೂ ಸೂರ್ಯಕುಮಾರ್ 34 ಎಸೆತಗಳಲ್ಲಿ 53 ರನ್ ಜೊತೆಯಾಟ ಕಟ್ಟಿದರು. ಇದರಲ್ಲಿ 42 ರನ್ ಸೂರ್ಯ ಬಾಚಿದರು. ಜಡೇಜ ಹಾಗೂ ಸೂರ್ಯಕುಮಾರ್ 24 ಎಸೆತಗಳಲ್ಲಿ 44 ರನ್ ಬಾರಿಸಿದರು. ಗ್ರೌಂಡ್ನ ಸುತ್ತಲೂ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈದ ಸೂರ್ಯಕುಮಾರ್ ಸ್ಕೋರ್ 400ರ ಗಡಿಗೆ ತಂದರು.









