ಲಂಡನ್: ಮಾಜಿ ಆಟಗಾರರ ಟೂರ್ನಿ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಫೈನಲ್ಗೆ ಲಗ್ಗೆಯಿಟ್ಟಿದೆ. ಭಾರತ, ಇಂಗ್ಲೆಂಡ್, ಪಾಕಿಸ್ತಾನ್, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿದಿದ್ದವು. ಟೂರ್ನಿಯ 2ನೇ ಸೆಮಿಫೈನಲ್ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವನ್ನು
86 ರನ್ಗಳಿಂದ ಸೋಲಿಸಿ ಫೈನಲ್ಗೇರಿದೆ.ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ಆರಂಭಿಕ ರಾಬಿನ್ ಉತ್ತಪ್ಪ ಉತ್ತಮ ಆರಂಭ ಒದಗಿಸಿದ್ದರು. 35 ಎಸೆತಗಳನ್ನು ಎದುರಿಸಿದ ಉತ್ತಪ್ಪ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 65 ರನ್ ಬಾರಿಸಿದರು. ನಾಯಕ ಯುವರಾಜ್ ಸಿಂಗ್ 28 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 59 ರನ್ ಬಾರಿಸಿದರು.
ಅಂತಿಮ ಓವರ್ಗಳ ವೇಳೆ ಜೊತೆಗೂಡಿದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ 6 ಓವರ್ಗಳಲ್ಲಿ 95 ರನ್ಗಳು ಮೂಡಿಬಂತು. ಇದರ ನಡುವೆ 23 ಎಸೆತಗಳನ್ನು ಎದುರಿಸಿದ ಯೂಸುಫ್ ಪಠಾಣ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 52 ರನ್ ಬಾರಿಸಿದರೆ, ಇರ್ಫಾಣ್ ಪಠಾಣ್ ಕೇವಲ 19 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 50 ರನ್ ಚಚ್ಚಿದರು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 252 ರನ್ ಕಲೆಹಾಕಿತು. 253 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 168 ರನ್ಗಳಿಸಿ 86 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಗೆಲುವಿನೊಂದಿಗೆ ಇಂಡಿಯಾ ಚಾಂಪಿಯನ್ಸ್ ತಂಡವು ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶಿಸಿದೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಗುರುಕೀರತ್ ಸಿಂಗ್ ಮಾನ್ , ಸುರೇಶ್ ರೈನಾ , ಅಂಬಟಿ ರಾಯುಡು , ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ಪವನ್ ನೇಗಿ , ವಿನಯ್ ಕುಮಾರ್ , ಹರ್ಭಜನ್ ಸಿಂಗ್ , ಧವಳ್ ಕುಲಕರ್ಣಿ.