ಸೇಂಟ್ ಲೂಸಿಯಾ: ನಾಯಕ ರೋಹಿತ್ ಶರ್ಮ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್–8ರ ಹಂತದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಬೃಹತ್ ಮೊತ್ತದ ಗುರಿ ನೀಡಿದೆ.ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ
5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಸ್ಪೋಟಕ ಬ್ಯಾಟಿಂಗ್ ನಡೆಸಿದ ನಾಯಕ ರೋಹಿತ್ ಶರ್ಮ ಕೇವಲ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 92 ರನ್ ಬಾರಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ ರೋಹಿತ್ ಶರ್ಮ ಆಸೀಸ್ ಬ್ಯಾಟರ್ಗಳ ಬೆವರಿಳಿಸಿದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶತಕದ ಅಂಚಿನಲ್ಲಿ ಎಡವಿದರು.
ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು.ಆದರೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಈ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿದರು. ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 31, ಶಿವಂ ದುಬೆ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 28 ರನ್, ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 27 ರನ್ ಬಾರಿಸಿದರು. ರೋಹಿತ್ ಶರ್ಮ ಹಾಗೂ ರಿಷಬ್ ಪಂತ್ ಎರಡನೇ ವಿಕೆಟ್ಗೆ 87 ರನ್ ಗಳಿಸಿದರು. ರಿಷಬ್ 15 ರನ್, ಜಡೇಜ ಅಜೇಯ 9 ರನ್ ಬಾರಿಸಿದರು
ಸೆಮಿಫೈನಲ್ ಪ್ರವೇಶಿಸಲು ಮಿಚೆಲ್ ಮಾರ್ಷ್ ತಂಡಕ್ಕೆ ಭಾರತದ ಎದುರು ಉತ್ತಮ ರನ್ರೇಟ್ನೊಂದಿಗೆ ಜಯಿಸುವ ಒತ್ತಡವಿದೆ.