ಕೊಲೊಂಬೊ:ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತ ತಂಡ ಸತತ ಮೂರನೇ ಗೆಲುವು ದಾಖಲಿಸಿದೆ.ಈ ಮೂಲಕ ಟೀಂ ಇಂಡಿಯಾ ಪ್ಲೇಆಫ್ಗೆ
ಪ್ರವೇಶ ಪಡೆದಿದೆ. ಕೊಲಂಬೋ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 61 ರನ್ಗಳ ಅಂತರದಲ್ಲಿ ಪಾಕಿಸ್ತಾನವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನಟ್ಟದ ಪಾಕಿಸ್ತಾನ ಭಾರತೀಯ ಬೌಲರ್ಗಳ ದಾಳಿಗೆ ಬೆದರಿ 18 ಓವರ್ಗಳಲ್ಲಿ 114 ರನ್ಗೆ ಆಲ್ ಔಟ್ ಆಯಿತು.
44 ರನ್ ಗಳಿಸಿದ ಪಾಕ್ ಪರ ವಿಕೆಟ್ ಕೀಪರ್ ಬ್ಯಾಟರ್ ಉಸ್ಮಾನ್ ಖಾನ್ ಗರಿಷ್ಠ ಸ್ಕೋರುದಾರರಾದರು. ಶಾಹಿನ್ ಶಾ ಅಫ್ರಿಧಿ 23 ರನ್ ಗಳಿಸಿದರು.ಪಾಕ್ಗೆ ಭಾರತೀಯ ಬೌಲರ್ಗಳಾದ ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಆರಂಭಿಕ ಹೊಡೆತ ನೀಡಿದರು. 34 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪಾಕ್ ಪಡೆಗೆ 78ರನ್ಗೆ 7 ವಿಕೆಟ್ ನಷ್ಟವಾಯಿತು. ಭಾರತದ ಪರ ಬೂಮ್ರಾ, ಪಾಂಡ್ಯ, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅಭಿಷೇಕ್ ಶರ್ಮಾ (0) ಆರಂಭದಲ್ಲೇ ಆಘಾತ ನೀಡಿದರು.ಆದರೆ, ಮತ್ತೊಬ್ಬ ಆರಂಭಿಕ ಇಶಾನ್ ಕಿಶನ್ ಪಾಕ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಕಿಶನ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಅಬ್ಬರಿಸಿದರು. ಅಂತಿಮವಾಗಿ ಕಿಶನ್ 40 ಎಸೆತಗಳಲ್ಲಿ 77 ರನ್ (10 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ನಲ್ಲಿ ಪವರ್ಪ್ಲೇ ಅವಧಿಯಲ್ಲಿ ಅತಿ ಹೆಚ್ಚು ರನ್ (42) ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಅವರು ತಮ್ಮದಾಗಿಸಿಕೊಂಡರು.
ಕಿಶನ್ ನಿರ್ಗಮನದ ನಂತರ ತಿಲಕ್ ವರ್ಮಾ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಮುಂದುವರಿಸಿದರು. ನಾಯಕನ ಆಟವಾಡಿದ ಸೂರ್ಯ 32 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತ್ಯದಲ್ಲಿ ಶಿವಂ ದುಬೆ (22) ಒಂದು ಭರ್ಜರಿ ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಲು ನೆರವಾದರು.
ಪಾಕಿಸ್ತಾನದ ಪರ ಸೈಮ್ ಅಯೂಬ್ 3 ಮತ್ತು ಉಸ್ಮಾನ್ ತಾರಿಕ್ ಒಂದು ಪ್ರಮುಖ ವಿಕೆಟ್ ಪಡೆಯುವ ಮೂಲಕ ಭಾರತದ ರನ್ ವೇಗಕ್ಕೆ ಬ್ರೇಕ್ ಹಾಕಿದರು.




