ನಾಗಪುರ: ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹಾಗೂ ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ.ನಾಗಪುರ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ
20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿತ್ತು.239 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೀಮ್ ಇಂಡಿಯಾ 48 ರನ್ ಅಂತರದಿಂದ ಗೆಲುವು ಸಾಧಿಸಿತು.
ಭಾರತದ ಪರ ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ 8 ಸಿಕ್ಸರ್, 4 ಬೌಂಡರಿ ನೆರವಿನಿಂದ 84 ರನ್ ಕಲೆಹಾಕಿದರು. ಹಾಗೂ ಇನಿಂಗ್ಸ್ ಕೊನೆಯಲ್ಲಿ ರಿಂಕು ಸಿಂಗ್ 20 ಎಸೆತಗಳಲ್ಲಿ 3 ಸಿಕ್ಸ್, 4 ಬೌಂಡರಿ ನೆರವಿನಿಂದ ಅಜೇಯ 44 ರನ್ ಕಲೆಹಾಕಿದರು.ಆರಂಭಿಕ ಆಘಾತದ ಹೊರತಾಗಿಯೂ, ನಾಯಕ ಸೂರ್ಯಕುಮಾರ್ ಯಾದವ್ (32 ರನ್), ಹಾರ್ದಿಕ್ ಪಾಂಡ್ಯ (25 ರನ್) ಕಲೆಹಾಕುವ ಮೂಲಕ ತಂಡವನ್ನು ಕುಸಿತದಿಂದ ಪಾರು ಮಾಡಿದರು. ನ್ಯೂಜಿಲೆಂಡ್ ಪರ ಜಾಕೋಬ್ ಡಫಿ ಹಾಗೂ ಕೈಲ್ ಜೇಮಿಸನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಕ್ರಿಸ್ಟಿಯನ್ ಕ್ಲಾರ್ಕ್, ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟನರ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.












