ಧರ್ಮಶಾಲಾ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಭರ್ಜರಿ ಇನ್ನೀಂಗ್ಸ್ ನೆರವಿನಿಂದ ಭಾರತ ಏಕದಿನ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಆಡಿದ 5 ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ನ್ಯೂಝಿಲೆಂಡ್ ನೀಡಿದ 274 ರನ್ ಗುರಿಯನ್ನು ಭಾರತ 48 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಮುಟ್ಟಿ ಗೆಲುವಿನ ನಗೆ ಬೀರಿತು. ಐಸಿಸಿ ಪಂದ್ಯಾಕೂಟದಲ್ಲಿ ನ್ಯೂಜಿಲೆಂಡ್ ವಿರುದ್ಧ 2003ರ ಬಳಿಕ ಪಡೆದ ಮೊದಲ ಗೆಲುವು ಇದಾಗಿದೆ. ಮತ್ತೊಮ್ಮೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ
ನೀಡಿದ ವಿರಾಟ್ ಕೊಹ್ಲಿ 104 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದರು. ಬಾಂಗ್ಲಾದೇಶ ವಿರುದ್ಧ ಶತಕ(103) ಬಾರಿಸಿದ್ದ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ (85)ಮತ್ತು ಅಪ್ಘಾನಿಸ್ತಾನ ವಿರುದ್ಧ(55) ಅರ್ಧ ಶತಕ ಬಾರಿಸಿದ್ದರು.ರವೀಂದ್ರ ಜಡೇಜ 44 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 39 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊಹ್ಲಿ ಮತ್ತು ಜಡೇಜ 6ನೇ ವಿಕೆಟ್ಗೆ 78 ರನ್ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ನಾಯಕ ರೋಹಿತ್ ಶರ್ಮ ಹಾಗೂ ಶುಭ್ಮನ್ ಗಿಲ್ ಸೇರಿ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 11.1 ಓವರ್ಗಳಲ್ಲಿ 71 ರನ್ ಸೇರಿಸಿದರು. ರೋಹಿತ್ 40 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 46 ರನ್ ಗಳಿಸಿದರೆ, ಶುಭ್ಮನ್ ಗಿಲ್ 31 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 26 ರನ್ ಗಳಸಿದರು. ಕೊಹ್ಲಿ ಜೊತೆ ಅರ್ಧ ಶತಕ ಜೊತೆಯಾಟ ಕಟ್ಟಿದ ಶ್ರಯಸ್ ಅಯ್ಯರ್ 29 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 33 ರನ್ ಗಳಿಸಿದರೆ, ಕೆ.ಎಲ್ .ರಾಹುಲ್ 35 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 27 ರನ್ ಗಳಿಸಿದರು. ಸೂರ್ಯಕುಮಾರ್ ಯಾಎವ್ ಎರಡು ರನ್ ಗಳಿಸಿ ರನೌಟ್ ಆದರು.
ಇದಕ್ಕೂ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 273 ರನ್ ಗಳಿಸಿತು. ಡ್ಯಾರಿಯಲ್ ಮಿಚೆಲ್ 130 ರನ್ಗಳಿಸಿದರು. ರಚಿನ್ ರವೀಂದ್ರ 75 ರನ್ ಗಳಿಸಿದರು.
ಭಾರತದ ಪರ ಮೊಹಮ್ಮದ್ ಶಮಿ 5, ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಮಹಮ್ಮದ್ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.