ಅಹಮದಾಬಾದ್: ಶಿವಂ ದುಬೆ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಟಿ20 ವಿಶ್ವಕಪ್ನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡವು ನೆದರ್ಲ್ಯಾಂಡ್ ವಿರುದ್ಧ 17 ರನ್ಗಳ ಗೆಲುವು ಸಾಧಿಸಿದೆ. ಲೀಗ್ ಹಂತದ ಎಲ್ಲಾ 4 ಪಂದ್ಯಗಳನ್ನು ಗೆದ್ದ ಭಾರತ ಅಜೇಯರಾಗಿ ಸೂಪರ್ 8 ಹಂತಕ್ಕೆ ಮುನ್ನಡೆದಿದೆ.ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ
ನೆದರ್ಲ್ಯಾಂಡ್ ತಂಡ ಕೊನೆಯ ತನಕ ಹೋರಾಟ ನಡೆಸಿ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿ ಪಂದ್ಯ ಕೈಚೆಲ್ಲಿತು. ಭಾರತದ ಪರ ವರುಣ್ ಚಕ್ರವರ್ತಿ 3 ಹಾಗೂ ಶಿವಂ ದುಬೆ 2 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಭಾರತದ ಪರ ಮೈದಾನದಲ್ಲಿ ಸಿಕ್ಸರ್ಗಳ ಸುನಾಮಿ ಎಬ್ಬಿಸಿದ ಶಿವಂ ದುಬೆ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಭಾರತ ತಂಡ ಬೃಹತ್ ಮೊತ್ತ ಪೇರಿಸಿತು.
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಶಿವಂ ದುಬೆ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಸಿಕ್ಕ ಅವಕಾಶಗಳನ್ನು ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದುಬೆ, ತಮ್ಮ ಇನಿಂಗ್ಸ್ನಲ್ಲಿ 6 ಸಿಕ್ಸರ್ಗಳನ್ನು ಬಾರಿಸಿದರು.
ಆರಂಭಿಕ ಆಘಾತಗಳ ಹೊರತಾಗಿಯೂ, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೋಡಿ 70 ರನ್ಗಳ ಅಮೂಲ್ಯ ಜೊತೆಯಾಟವಾಡಿತು. ಹಾರ್ದಿಕ್ ಪಾಂಡ್ಯ ಕೂಡ ಅಂತಿಮ ಹಂತದಲ್ಲಿ ಅಬ್ಬರಿಸಿದರು. ಕೊನೆಯ 5 ಓವರ್ಗಳಲ್ಲಿ ಭಾರತ ತಂಡ ಬರೋಬ್ಬರಿ 65 ರನ್ಗಳನ್ನು ಕೊಳ್ಳೆಹೊಡೆಯಿತು. ದುಬೆ ಅವರ ಲಾಂಗ್-ಆನ್ ಸಿಕ್ಸರ್ಗಳು ಮತ್ತು ಪಾಂಡ್ಯ ಅವರ ಟ್ರೇಡ್ಮಾರ್ಕ್ ಹೆಲಿಕಾಪ್ಟರ್ ಶಾಟ್ಗಳು ಅಭಿಮಾನಿಗಳಿಗೆ ರಸದೌತಣ ನೀಡಿದವು. ದುಬೆ 31 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರೆ, ಪಾಂಡ್ಯ 21 ಎಸೆತಗಳಲ್ಲಿ 3 ಸಿಕ್ಸರ್ ನೆರವಿನಿಂದ 30 ರನ್ ಬಾರಿಸಿದರು. ನಾಯಕ ಸೂರ್ಯಕುಮಾರ್ ಯಾದವ್
28 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ನೆರವಿನಿಂದ 34 ರನ್ ಭಾರಿಸಿದರು.






