ಪುಣೆ: ವಿರಾಟ್ ಕೊಹ್ಲಿ ಸಿಡಿಸಿದ ಅಮೋಘ ಶತಕದ (103) ನೆರವಿನಿಂದ ಬಾಂಗ್ಲಾದೇಶ ವಿರುದ್ಧ ಇಂದು ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.ಈ ಮೂಲಕ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ನೀಡಿದ 257 ರನ್ಗಳ ಗುರಿ ಬೆನ್ನಟ್ಟಿದ ಭಾರತ 41.3 ಓವರ್ಗಳಲ್ಲಿ ಮೂರು ವಿಕೆಟ್
ನಷ್ಟಕ್ಕೆ 261 ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು. ಅಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 48ನೇ ಶತಕ ಸಾಧನೆ ಮಾಡಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಸಿಕ್ಸರ್ ಗಳಿಸುವ ಮೂಲಕ ಶತಕದ ಗೆರೆ ದಾಟುವ ಮೂಲಕ ಭಾರತಕ್ಕೆ ಗೆಲುವು ಒದಗಿಸಿಕೊಟ್ಟ ವಿರಾಟ್, 103 ರನ್ ಗಳಿಸಿ ಔಟಾಗದೆ ಉಳಿದರು. 97 ಎಸೆತಗಳನ್ನು ಎದುರಿಸಿದ ವಿರಾಟ್ ಇನಿಂಗ್ಸ್ನಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳು ಸೇರಿದ್ದವು. ಶುಭಮನ್ ಗಿಲ್ (53) ಹಾಗೂ ನಾಯಕ ರೋಹಿತ್ ಶರ್ಮಾ (48) ಮತ್ತು ಕೊನೆಯ ಹಂತದಲ್ಲಿ ಕೆ.ಎಲ್ ರಾಹುಲ್ (34) ಉಪಯುಕ್ತ ಕಾಣಿಕೆ ನೀಡಿದರು. ಬಾಂಗ್ಲಾ ಪರ ಮೆಹದಿ ಹಸನ್ ಮಿರಾಜ್ ಎರಡು ವಿಕೆಟ್ ಗಳಿಸಿದರು.
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಎಂಟು ವಿಕೆಟ್ ನಷ್ಟಕ್ಕೆ 256 ರನ್ ಪೇರಿಸಿತು.ಬಾಂಗ್ಲಾ ಪರ ತಂಜೀದ್ ಹಸನ್ ಹಾಗೂ ಲಿಟನ್ ದಾಸ್ ಆಕರ್ಷಕ ಅರ್ಧ ಶತಕಗ ಗಳಿಸಿದರು.ಹಸನ್ 51 ಹಾಗೂ ದಾಸ್ 66 ರನ್ ಗಳಿಸಿ ಮಿಂಚಿದರು. ಮೆಹಮುದುಲ್ಲಾ 46 ಹಾಗೂ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಮ್ 38 ರನ್ ಗಳಿಸಿದರು.
ಭಾರತದ ಪರ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜ ತಲಾ ಎರಡು ಮತ್ತು ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಗಳಿಸಿದರು.