ಚೆನ್ನೈ:ಸ್ಕೋರ್ ಬೋರ್ಡ್ನಲ್ಲಿ ಕೇವಲ ಎರಡು ರನ್ ಇದ್ದಾಗ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಭರ್ಜರಿ ಅರ್ಧಶತಕಗಳ ಮೂಲಕ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಜಯ ತಂದು ಕೊಟ್ಟರು. ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಜಯದ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ಶುಭಾರಂಭ ಮಾಡಿತು.ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಏಕದಿನ
ವಿಶ್ವಕಪ್ ಕ್ರಿಕೆಟ್ನ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 200 ರನ್ ಗಳ ಬೆನ್ನತ್ತಿದ ಭಾರತ 41.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿ ಗೆಲುವಿನ ನಗೆ ಬೀರಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕನ್ನಡಿಗ ಕೆ.ಎಲ್.ರಾಹುಲ್ ಅಜೇಯ 97 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 85 ರನ್ ಬಾರಿಸಿದರು.
ಭಾರತ ಬ್ಯಾಟಿಂಗ್ ಆರಂಭಿಸಿ ಕೇವಲ ಎರಡು ಓವರ್ ಗಳಲ್ಲಿ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.ನಾಯಕ ರೋಹಿತ್ ಶರ್ಮ, ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಶೂನ್ಯ ಸುತ್ತಿ ಸ್ಕೋರ್ ಬೋರ್ಡ್ನಲ್ಲಿ ಎರಡು ರನ್ ಇದ್ದಾಗ ಪೆವಿಲಿನಿಯನ್ ಸೇರಿದರು. ಬಳಿಕ ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಅವರು ರಕ್ಷಣಾತ್ಮಕ ಆಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 4ನೇ ವಿಕೆಟ್ಗೆ ಕೊಹ್ಲಿ ಹಾಗೂ ರಾಹುಲ್ 165 ರನ್ಗಳ ಜೊತೆಯಾಟ ನಡೆಸಿ ಗೆಲುವನ್ನು ಖಾತ್ರಿಪಡಿಸಿದರು. ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 85 ರನ್ ಬಾರಿಸಿದರು.ಕೆ.ಎಲ್.ರಾಹುಲ್ 115 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 97 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ ಅಜೇಯ 11 ರನ್ ಗಳಿಸಿದರು.
ಇದಕ್ಕೂ ಮುನ್ನ ಭಾರತೀಯರ ಬಿಗು ಬೌಲಿಂಗ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 199 ರನ್ಗೆ ಆಲ್ಔಟಾಯಿತು. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 41 ರನ್ ಗಳಿಸಿ ನಿರ್ಗಮಿಸಿದರು. ಸ್ಟೀವ್ ಸ್ಮಿತ್ 46 ರನ್ ಗಳಿಸಿದರೆ ಮಾರ್ನುಸ್ ಲಬುನೇಶ್ 27 ರನ್ ಗಳಿಸಿದರು. ಮಿಚೆಲ್ ಮಾರ್ಸ್, ಅಲೆಕ್ಸ್ ಕ್ಯಾರಿ ಕೂಡ ಶೂನ್ಯ ಸುತ್ತಿ ನಡೆದರು. ಗ್ಲೆನ್ ಮ್ಯಾಕ್ಸವೆಲ್ 15 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ 8 ರನ್ ಮತ್ತು ಪ್ಯಾಟ್ ಕಮಿನ್ಸ್ 15 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಭಾರತದ ಪರ ರವೀಂದ್ರ ಜಡೇಜ 3 ವಿಕೆಟ್ ಉರುಳಿಸಿದರೆ, ಬುಮ್ರಾ, ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ , ಅಶ್ವಿನ್, ಪಾಂಡ್ಯ, ಮಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.