ಸುಳ್ಯ:ದಾಖಲೆ ಮೇಲೆ ದಾಖಲೆ ಬರೆದ ಭರ್ಜರಿ ಇನ್ನೀಂಗ್ಸ್ ಕಟ್ಟಿದ ಹಿಟ್ಮ್ಯಾನ್ ರೋಹಿತ್ ಶರ್ಮ ಸಿಡಿಸಿದ ಸ್ಪೋಟಕ ಶತಕದ ನೆರವಿನಿಂದ ಭಾರತ ಅಫ್ಗಾನಿಸ್ಥಾನ ತಂಡದ ವಿರುದ್ಧ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು.ಗೆಲುವಿಗೆ 273 ರನ್ ಗುರಿ ಪಡೆದ ಭಾರತ 35 ಓವರ್ಗಳಲ್ಲಿ
ಎರಡು ವಿಕೆಟ್ ನಷ್ಟಕ್ಕೆ 273 ರನ್ ಭಾರಿಸಿ ಗೆಲುವು ಸಾಧಿಸಿತು. ನಾಯಕ ರೋಹಿತ್ ಶರ್ಮ ಭಾರಿಸಿದ ಸ್ಪೋಟಕ ಶತಕ ಭಾರತಕ್ಕೆ ಸುಲಭ ಜಯ ತಂದು ಕೊಟ್ಟಿತು. 84 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 130 ರನ್ ಚಚ್ಚಿದರು. ರೋಹಿತ್ ಶರ್ಮ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದರು. 63 ಎಸೆತಗಳಲ್ಲಿ ಶತಕ ದಾಖಲಿಸಿದ ರೋಹಿತ್ ಶರ್ಮ ವಿಶ್ವಕಪ್ನಲ್ಲಿ ಅತಿ ವೇಗದ ಶತಕ ಭಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಸೃಷ್ಠಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ಶ್ರೇಯಕ್ಕೂ ಅವರು ಭಾಜನರಾದರು.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಈವರೆಗೆ ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಅವರ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ರೋಹಿತ್ ಕಸಿದುಕೊಂಡಿದ್ದಾರೆ. ಗೇಲ್ ಖಾತೆಯಲ್ಲಿ 553 ಸಿಕ್ಸರ್ಗಳಿದ್ದರೆ, ರೋಹಿತ್ ಬರೋಬ್ಬರಿ 555 ಸಿಕ್ಸರ್ ಸಿಡಿಸಿದ್ದಾರೆ.ಅಫ್ಗಾನಿಸ್ತಾನ ಬೌಲರ್ಗಳೆದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದ ರೋಹಿತ್ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಒಂದು ಸಾವಿರ ರನ್ ಕಲೆಹಾಕಿದ ಬ್ಯಾಟರ್ಗಳ ಸಾಲಿಗೆ ಸೇರಿದರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ 23ನೇ ಹಾಗೂ ಭಾರತದ 4ನೇ ಬ್ಯಾಟರ್ ಎನಿಸಿದರು.
ಈವರೆಗೆ 19 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರುವ ರೋಹಿತ್ 6 ಶತಕ ಮತ್ತು 4 ಅರ್ಧಶತಕ ಸಹಿತ 1055 ರನ್ ಗಳಿಸಿದ್ದಾರೆ.
ಈ ವಿಶ್ವಕಪ್ನಲ್ಲಿ ಭಾರತದ ಪರ ವಿರಾಟ್ ಕೊಹ್ಲಿ ಸತತ ಎರಡನೇ ಪಂದ್ಯದಲ್ಲೂ ಅರ್ಧ ಶತಕ ಸಿಡಿಸಿದರು. ಕೊಹ್ಲಿ 56 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ ಅಜೇಯ 55 ರನ್ ಗಳಿಸಿದರು. ಇಶಾನ್ ಕಿಸನ್ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 47 ರನ್ , ಶ್ರೇಯಸ್ ಅಯ್ಯರ್ 23 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನಿಸ್ತಾನ ಪರ
ಝರ್ದಾನ್ 22 ರನ್,ರಹ್ಮನುಲ್ಲಾ ಗುರ್ಬಜ್ 21 ರನ್, ರಹಮತ್ ಶಾ 16 ರನ್, ನಾಯಕ ಹಸ್ಮತುಲ್ಲಾ ಶಾಹಿದಿ 82, ಮತ್ತು ಒಮರ್ಜೈ 62 ರನ್ ಪೇರಿಸಿದರು. ಭಾರತದ ಪರ ಜಸ್ಪ್ರಿತ್ ಬೂಮ್ರ 39 ರನ್ ಗೆ 4 ವಿಕೆಟ್ ಪಡೆದು ಮಿಂಚಿದರು.ಹಾರ್ದಿಕ್ ಪಾಂಡ್ಯ 43 ರನ್ ಗೆ 2 ವಿಕೆಟ್ ಪಡೆದರು. ಶಾರ್ದೂಲ್ ಹಾಗೂ ಕುಲ್ದೀಪ್ ತಲಾ ಒಂದು ವಿಕೆಟ್ ಪಡೆದರು.