ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಅಫ್ಗಾನಿಸ್ತಾನ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲೂ ಜಯ ಗಳಿಸುವ ಮೂಲಕ ಭಾರತ ತಂಡ 3–0ರಿಂದ ಸರಣಿ ಗೆದ್ದಿದೆ.ಎರಡು ಬಾರಿ ಸೂಪರ್ ಓವರ್ ಕಂಡ ಈ ಪಂದ್ಯದಲ್ಲಿ ಅಫ್ಗಾನಿಸ್ತಾನ ದಿಟ್ಟ ಹೋರಾಟ ನಡೆಸಿತು.ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ
4 ವಿಕೆಟ್ಗಳಿಗೆ 212 ರನ್ ಗಳಿಸಿತು. ರೋಹಿತ್ ಶರ್ಮಾ ಅಜೇಯ ಶತಕ ದಾಖಲಿಸಿದರು. ರಿಂಕು ಸಿಂಗ್ ಅಜೇಯ ಅರ್ಧಶತಕ ಹೊಡೆದರು. ಆದರೆ ದಿಟ್ಟ ತಿರುಗೇಟು ನೀಡಿದ ಅಫ್ಗನ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 212 ರನ್ ಗಳಿಸಿ ಟೈ ಮಾಡಿಕೊಂಡಿತು.ನಂತರ ನಡೆದ ಸೂಪರ್ ಓವರ್ನಲ್ಲಿ ಅಫ್ಗನ್ ತಂಡವು 16 ರನ್ ಗಳಿಸಿತು. ಆದರೆ ಭಾರತ ತಂಡ ಕೂಡ 16 ರನ್ ಗಳಿಸಿದ ಕಾರಣ ಇದು ಕೂಡ ಸಮಬಲವಾಯಿತು. ನಂತರ ಎರಡನೇ ಸೂಪರ್ ಓವರ್ ಘೋಷಿಸಲಾಯಿತು. ಬ್ಯಾಟಿಂಗ್ ಮಾಡಿದ ಭಾರತ ತಂಡ 11 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ 1 ರನ್ಗೆ ರನ್ ಗಳಿಸಿ 10 ರನ್ಗೆ ಸೋಲೊಪ್ಪಿಕೊಂಡಿತು.
ಇದಕ್ಕೂ ಮೊದಲು ಭಾರತ ತಂಡವು 22 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ ನಾಲ್ಕು ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ಖಾತೆ ತೆರೆಯದೇ ನಿರ್ಗಮಿಸಿದರು.ಆದರೆ ಈ ಸಂದರ್ಭದಲ್ಲಿ ಕ್ರೀಸ್ನಲ್ಲಿದ್ದ ನಾಯಕ ರೋಹಿತ್ ಅವರೊಂದಿಗೆ ಸೇರಿಕೊಂಡ ರಿಂಕು ಸಿಂಗ್ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 190 ರನ್ ಗಳಿಸಿದರು. ರೋಹಿತ್ (ಅಜೇಯ 121; 69ಎ, 4X11, 6X8) ಟಿ20 ಕ್ರಿಕೆಟ್ ಮಾದರಿಯಲ್ಲಿ ಐದು ವರ್ಷಗಳ ನಂತರ ತಮ್ಮ ಖಾತೆಗೆ ಶತಕ ಸೇರಿಸಿಕೊಂಡರು. ಚುಟುಕು ಮಾದರಿಯಲ್ಲಿ ಇದು ಅವರ ಐದನೇ ಶತಕ.
ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ರೋಹಿತ್ ಇಲ್ಲಿ ಎಚ್ಚರಿಕೆಯಿಂದ ಆಟ ಆರಂಭಿಸಿದರು. ತಾವೆದುರಿಸಿದ ಏಳನೇ ಎಸೆತದಲ್ಲಿ ಅವರು ಒಂದು ರನ್ ಗಳಿಸಿದರು. ಇನಿಂಗ್ಸ್ನ ಮೂರನೇ ಓವರ್ನಲ್ಲಿ ಒಂದು ಬೌಂಡರಿ ಗಳಿಸಿದರು. ಮೊದಲ ಓವರ್ನಲ್ಲಿ ಅವರು ಹೊಡೆತಕ್ಕೆ ಯತ್ನಿಸಿದ ಎರಡು ಎಸೆತಗಳಲ್ಲಿ ಚೆಂಡು ಪ್ಯಾಡ್ ಸವರಿ ಬೌಂಡರಿಗೆರೆ ದಾಟಿದವು. ಅದರಿಂದಾಗಿ ಆ ಎಂಟೂ ರನ್ಗಳು ಲೆಗ್ಬೈ ಖಾತೆ ಸೇರಿದವು.ಇನಿಂಗ್ಸ್ನ ಮೊದಲ ಹತ್ತು ಓವರ್ಗಳಲ್ಲಿ ಭಾರತ ತಂಡವು ನಾಲ್ಕು ವಿಕೆಟ್ಗಳಿಗೆ 61 ರನ್ ಮಾತ್ರ ಗಳಿಸಿತ್ತು. ನಂತರದ ಹತ್ತು ಓವರ್ಗಳಲ್ಲಿ ರೋಹಿತ್ ಮತ್ತು ರಿಂಕು ರನ್ ಹೊಳೆ ಹರಿಸಿದರು. ಅದರಲ್ಲಿ ರಿಂಕು ಪಾಲು 69 ರನ್ಗಳು. ಅದರಲ್ಲೂ ಕೊನೆಯ ಓವರ್ನಲ್ಲಿ 36 ರನ್ಗಳು ಹರಿದುಬಂದವು. ಈ ಓವರ್ನಲ್ಲಿ ಒಟ್ಟು ಐದು ಸಿಕ್ಸರ್ಗಳು ಸಿಡಿದವು. ಇದರಲ್ಲಿ ಒಂದು ಫ್ರೀಹಿಟ್ ಕೂಡ ಇತ್ತು.
ಅಪ್ಘಾನ್ ಪರ ರೆಹಮಾನುಲ್ಲಾ ಗುರ್ಬಾಜ್ 50, ಇಬ್ರಾಹಿಂ ಝದ್ರಾನ್ 50, ಗುಲ್ಬದೀನ್ ನೈಬ್ ಔಟಾಗದೆ 55, ಮೊಹಮ್ಮದ್ ನಬಿ 34 ರನ್ ಬಾರಿಸಿದರು.








