ದುಬೈ:ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತು. ಸ್ಪಿನ್ನರ್ಗಳ ಕೈಚಳಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನವನ್ನು 5 ವಿಕಟೆ್ಗಳಿಂದ ಮಣಿಸಿ ಭಾರತ ಏಷ್ಯಾ ಕಪ್ ಎತ್ತಿತು.ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ರೋಚಕ ಫೈನಲ್ನಲ್ಲಿ
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಭಾರತದ ಸ್ಪಿನ್ ಸುಳಿಯಲ್ಲಿ ಸಿಲುಕಿ 19.1 ಓವರ್ಗಳಲ್ಲಿ 146 ರನ್ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ದಿದ ಭಾರತ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಭಾರತಕ್ಕೆ ಆರಂಭಿಕ ಅಘಾತ ಎದುರಾಯಿತು. 4 ಓವರ್ಗಳಲ್ಲಿ 20 ರನ್ಗೆ 3 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಅರ್ಧ ಶತಕ ಸಿಡಿಸಿದ ತಿಲಕ್ ವರ್ಮ ಆಸರೆಯಾದರು. ತಿಲಕ್ ವರ್ಮ ಹಾಗೂ ಸಂಜು ಸ್ಯಾಮ್ಸನ್ 4ನೇ ವಿಕೆಟ್ಗೆ 57 ರನ್ ಜೊತೆಯಾಟದ ಮೂಲಕ ಚೇತರಿಕೆ ನೀಡಿದರು. ಈ ಹಂತದಲ್ಲಿ
21 ಎಸೆತಗಳಲ್ಲಿ 24 ರನ್ ಗಳಿಸಿದ ಸಂಜು ಔಟ್ ಆದರು. ಬಳಿಕ ತಿಲಕ್ ವರ್ಮ ಹಾಗೂ ಶಿವಂ ದುಬೆ 60 ರನ್ಗಳ ಭರ್ಜರಿ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ತಿಲಕ್ ವರ್ಮ 53 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 69ರನ್ ಗಳಿಸಿದರು. ಶಿವಂ ದುಬೆ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 2ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು. ಅಭಿಷೇಕ್ ಶರ್ಮ 5, ಶುಭ್ಮನ್ ಗಿಲ್ 12, ನಾಯಕ ಸೂರ್ಯಕುಮಾರ್ ಯಾದವ್ 1 ರನ್ ಗಳಿಸಿ ಔಟ್ ಆದರು. ರಿಂಕು ಸಿಂಗ್ (4*) ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡರು.ಪಾಕ್ ಪಡೆಯ ಆರಂಭಿಕ ಬ್ಯಾಟರ್ಗಳಾದ ಸಾಹಿಬ್ ಝಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಭರ್ಜರಿ ಆರಂಭ ನೀಡಿದರು.ಈ ಜೋಡಿ ಮೊದಲ ವಿಕೆಟ್ಗೆ 9.4 ಓವರ್ಗಳಲ್ಲಿ 84 ರನ್ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು. ಆದರೆ,ಆ ಅಡಿಪಾಯದ ಮೇಲೆ ಬೃಹತ್ ಮೊತ್ತ ಪೇರಿಸಲು ಉಳಿದವರಿಗೆ ಸಾಧ್ಯವಾಗಲಿಲ್ಲ.’ಮಿಸ್ಟರಿ ಸ್ಪಿನ್ನರ್’ ವರುಣ್ ಚಕ್ರವರ್ತಿ, ಆರಂಭಿಕರಿಬ್ಬರನ್ನೂ ಪೆವಿಲಿಯನ್ಗೆ ಅಟ್ಟಿದರು. 38 ಎಸೆತಗಳಲ್ಲಿ 57 ರನ್ ಗಳಿಸಿದ್ದ ಫರ್ಹಾನ್ ಅವರನ್ನು ಔಟ್ ಮಾಡುವುದರೊಂದಿಗೆ ಪಾಕ್ ಪಡೆಯ ಕುಸಿತ ಆರಂಭವಾಯಿತು. ಜಮಾನ್ 35 ಎಸೆತಗಳಲ್ಲಿ 46 ರನ್ ಗಳಿಸಿದರು. ಉಳಿದ ಬ್ಯಾಟರ್ಗಳು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ.ಹೀಗಾಗಿ, ಪಾಕ್ ಪಡೆ 19.1 ಓವರ್ಗಳಲ್ಲೇ ಆಲೌಟ್ ಆಯಿತು.ಪಾಕ್ ಪಡೆಯ ಎಂಟು ವಿಕೆಟ್ಗಳು ಭಾರತದ ಸ್ಪಿನ್ನರ್ಗಳ ಪಾಲಾದವು.’ಚೈನಾಮನ್’ ಕುಲದೀಪ್ ಯಾದವ್ 4 ಓವರ್ಗಳಲ್ಲಿ 30 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಹಾಗೂ ವೇಗಿ ಜಸ್ಪ್ರೀತ್ ಬೂಮ್ರಾ ಎರಡೆರಡು ವಿಕೆಟ್ ಹಂಚಿಕೊಂಡರು.
ಪ್ರಸ್ತುತ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ 3ನೇ ಸಲ ಮುಖಾಮುಖಿಯಾಗಿವೆ. ಮೂರು ಬಾರಿಯೂ ಭಾರತ ಜಯಭೇರಿ ಬಾರಿಸಿದೆ. ಲೀಗ್ ಹಂತ ಹಾಗೂ ಸೂಪರ್–4 ಸುತ್ತಿನಲ್ಲಿ ಎದುರಾದ ಟೀಂ ಇಂಡಿಯಾ ಜಯ ಸಾಧಿಸಿತ್ತು.ಫೈನಲ್ನಲ್ಲಿಯೂ ಪಾಕ್ ಮಣಿಸಿ ಟೀಂ ಇಂಡಿಯಾ ಕಪ್ ಎತ್ತಿತು.41 ವರ್ಷಗಳ ಇತಿಹಾಸ ಹೊಂದಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇತ್ತಂಡಗಳು ಫೈನಲ್ನಲ್ಲಿ ಪರಸ್ಪರ ಮೊದಲ ಬಾರಿ ಎದುರಾದವು.ಇದರಲ್ಲಿ ಜಯ ಗಳಿಸುವ ಮೂಲಕ ಭಾರತ ಇತಿಹಾಸ ಬರೆಯಿತು.









