ಸುಳ್ಯ: ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರು ನ.15 ರಂದು ಸುಳ್ಯ ಪೊಲೀಸ್ ವೃತ್ತಕ್ಕೆ ಭೇಟಿ ನೀಡಿದರು. ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಗೆ ಆಗಮಿಸಿದ ಅವರು ಪೊಲೀಸ್ ಇಲಾಖೆಯ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು. ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸೂಚಿಸಿದರು. ಬೀಟ್ ವ್ಯವಸ್ಥೆಯನ್ನು
ಇನ್ನಷ್ಟು ಕ್ರಿಯಾಶೀಲವಾಗಿ ಮಾಡಲು, ಪ್ರಮುಖ ಪ್ರಕರಣಗಳ ಬಗ್ಗೆ, ಹಳೆಯ ಪ್ರಕರಣಗಳ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
ಸುಳ್ಯದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸುವ ಬಗ್ಗೆ ಸದ್ಯ ಪ್ರಸ್ತಾವನೆ ಇಲ್ಲ. ಮುಂದೆ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಆಗಿದ್ದು ಉದ್ಘಾಟನೆ ಸದ್ಯದಲ್ಲಿಯೇ ನಡೆಯಲಿದೆ. ಬೆಳ್ಳಾರೆ ಪೊಲೀಸ್ ವಸತಿ ಗೃಹ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಲ್ಲುಗುಂಡಿ ಪೊಲೀಸ್ ಹೊರ ಠಾಣೆ ಕಟ್ಟಡ ನಿರ್ಮಾಣ ಬೇಡಿಕೆ ಬಗ್ಗೆ ಗಮನ ಸೆಳೆದಾಗ ಪರಿಶೀಲನೆ ನಡೆಸುವುದಾಗಿ ಐಜಿಪಿ ಅಮಿತ್ ಸಿಂಗ್ ಅವರು ಹೇಳಿದರು.
ದ.ಕ.ಜಿಲ್ಲಾ ಎಸ್ಪಿ ಯತೀಶ್ ಎನ್, ಪುತ್ತೂರು ಡಿವೈಎಸ್ಪಿ ಅರುಣ್ ನಾಗೇ ಗೌಡ, ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಸುಳ್ಯ ಎಸ್ಐ ಸಂತೋಷ್, ಬೆಳ್ಳಾರೆ ಎಸ್ಐ ಈರಯ್ಯ ದೂಂತೂರು, ಸುಬ್ರಹ್ಮಣ್ಯ ಎಸ್ಐ ಕಾರ್ತಿಕ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.