ನ್ಯೂಯಾರ್ಕ್: ಜೂನ್ 1 ರಿಂದ ಐಸಿಸಿ ಟಿ20 ವಿಶ್ವಕಪ್ ಆರಂಭವಾಗಲಿದೆ.ಇದೇ ಮೊದಲ ಬಾರಿಗೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ ನಡೆಯುತ್ತಿದೆ. ಲೀಗ್ ಹಂತ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿದ್ದು ಇದೀಗ ಐಸಿಸಿ, ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು
ಬಿಡುಗಡೆ ಮಾಡಿದೆ. ಮೇ 27 ರಿಂದ ಈ ಅಭ್ಯಾಸ ಪಂದ್ಯಗಳು ಆರಂಭವಾಗಲಿದ್ದು, ಈ ದಿನದಂದು 3 ಅಭ್ಯಾಸ ಪಂದ್ಯಗಳು ನಡೆಯಲ್ಲಿವೆ. ಮೇ 28 ರಂದು ಕೂಡ 3 ಪಂದ್ಯಗಳು ನಡೆಯಲಿದ್ದು, ಮೇ 29 ರಂದು 2 ಪಂದ್ಯಗಳು ನಡೆಯಲ್ಲಿವೆ.
ಮೇ 30 ರಂದು 5 ಪಂದ್ಯಗಳು ನಡೆಯಲಿದ್ದು, ಮೇ 31 ರಂದು ಕೂಡ 2 ಪಂದ್ಯಗಳು ನಡೆಯಲ್ಲಿವೆ. ಹಾಗೆಯೇ ಜೂನ್ 1 ರಂದು ಏಕೈಕ ಅಭ್ಯಾಸ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕೈಕ ಅಭ್ಯಾಸ ಪಂದ್ಯ ಅಮೆರಿಕದಲ್ಲಿ ನಡೆಯಲಿದೆ.ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ 3 ತಂಡಗಳ ಹೆಸರಿಲ್ಲ. ಈ 3 ತಂಡಗಳಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೇರಿವೆ. ಇದಲ್ಲದೇ 17 ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡಲಿವೆ.
ಈ ಪಂದ್ಯಗಳು ತಲಾ 20 ಓವರ್ಗಳದ್ದಾಗಿದ್ದು, ಎಲ್ಲಾ 15 ಆಟಗಾರರು ಆಡುವ ಅವಕಾಶವನ್ನು ಪಡೆಯುತ್ತಾರೆ. ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್ 2024 ರ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯವು ನ್ಯೂಯಾರ್ಕ್ನಲ್ಲಿ ನಡೆಯಲಿದೆ.