ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿರುವ ಭಾರತವು ಐಸಿಸಿ ಟೆಸ್ಟ್ ಟೀಮ್ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ಮರಳಿದೆ. 122 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಐಸಿಸಿ ಟೀಮ್ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನವನ್ನು ಮತ್ತೆ ವಶಪಡಿಸಿಕೊಂಡಿದೆ. 117 ರೇಟಿಂಗ್ ಪಾಯಿಂಟ್ಸ್ ಪಡೆದ ಆಸ್ಟ್ರೇಲಿಯವು ದ್ವಿತೀಯ
ಸ್ಥಾನಕ್ಕೆ ಕುಸಿದಿದೆ, ಇಂಗ್ಲೆಂಡ್ 111 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಮೂರನೇ ಸ್ಥಾನ ಆಕ್ರಮಿಸಿಕೊಂಡಿದೆ.ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಇದೀಗ ಎಲ್ಲ ಮಾದರಿಯ ಪಂದ್ಯಗಳ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.ಏಕದಿನ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಭಾರತವು 121 ರೇಟಿಂಗ್ ಪಾಯಿಂಟ್ಸ್ನೊಂದಿಗೆ ನಂ.1 ಸ್ಥಾನದಲ್ಲಿದೆ. ಆಸ್ಟ್ರೇಲಿಯ 118 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಎರಡನೇ ಸ್ಥಾನದಲ್ಲಿದೆ.ಅದೇ ರೀತಿ ಟ್ವೆಂಟಿ-20 ಕ್ರಿಕೆಟ್ನಲ್ಲಿ ಭಾರತ ತಂಡ 266 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಅಗ್ರ ಸ್ಥಾನದಲ್ಲಿದೆ. ಇಂಗ್ಲೆಂಡ್ 256 ಪಾಯಿಂಟ್ಸ್ ಗಳಿಸಿದೆ.
ಭಾರತವು 2023ರ ಸೆಪ್ಟಂಬರ್ನಿಂದ 2024ರ ಜನವರಿ ತನಕ ಎಲ್ಲ 3 ಮಾದರಿಯ ಕ್ರಿಕೆಟ್ನಲ್ಲಿ ನಂ.1 ಸ್ಥಾನದಲ್ಲಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು 1-1ರಿಂದ ಡ್ರಾ ಸಾಧಿಸಿದ ನಂತರ ಟೆಸ್ಟ್ ಟೀಮ್ ರ್ಯಾಂಕಿಂಗ್ ನಲ್ಲಿ ಭಾರತವು ಎರಡನೇ ಸ್ಥಾನಕ್ಕೆ ಕುಸಿದಿತ್ತು.ಭಾರತವು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಕೂಡ ಅಗ್ರ ಸ್ಥಾನದಲ್ಲಿದೆ.









