*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ತನ್ನ ಎಂಭತ್ತರ ಹರೆಯದಲ್ಲಿಯೂ ಹೊಸ ತಲೆಮಾರಿಗೆ ಸಂಗೀತ ಜ್ಞಾನ ಧಾರೆಯೆರೆಯುತ್ತಿದ್ದಾರೆ ವಿದ್ವಾನ್ ಹರಿಹರ ಬಾಯಾಡಿ. ತನ್ನ ನಿವೃತ್ತಿ ಜೀವನವನ್ನು ಸಂಗೀತಕ್ಕಾಗಿ ಮೀಸಲಿಟ್ಟಿರುವ ಅವರು ಕಳೆದ ಎರಡು ದಶಕಗಳಿಂದ ಹಲವಾರು ಮಂದಿಯ ಬದುಕಿನಲ್ಲಿ ಸಂಗೀತದ ನಾದ ತುಂಬಿದ್ದಾರೆ. ಮನ ಮನಗಳಲ್ಲಿ ರಾಗಸುಧೆ ಹರಿಸಿದ್ದಾರೆ. ತನ್ನ ಮನೆಯನ್ನೇ ‘ನಾದಮಂಟಪ’ ಸಂಗೀತ ಶಾಲೆಯಾಗಿ ಮಾರ್ಪಾಡು ಮಾಡಿರುವ ಅವರು
ಸುಮಾರು 25ಕ್ಕೂ ಹೆಚ್ಚು ಮಂದಿಗೆ ಪ್ರತಿ ದಿನ ಸಂಗೀತ ಕಲಿಸುತ್ತಿದ್ದಾರೆ. ಸುಮಾರು 10 ಮಂದಿಗೆ ಆನ್ಲೈನ್ ಮೂಲಕವೂ ಸಂಗೀತ ಶಿಕ್ಷಣ ಬೋಧಿಸುತ್ತಿದ್ದಾರೆ. ಭಾರತೀಯ ಅಂಚೆ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ನಿವೃತ್ತರಾದ ನಂತರ ಸುಳ್ಯದಲ್ಲಿ ನೆಲೆಸಿರುವ ಹರಿಹರ ಬಾಯಾಡಿಯವರು ನಿವೃತ್ತಿ ಜೀವನವನ್ನು ಸಂಗೀತದ ಸಪ್ತಸ್ವರಗಳಲ್ಲಿ ಕಳೆಯುತ್ತಿದ್ದಾರೆ. ಸುಮಾರು 20 ವರ್ಷಗಳಲ್ಲಿ ನೂರಾರು ಮಂದಿಗೆ ಸಂಗೀತ ಕಲಿಸಿದ ಅವರು ನಾದಮಂಟಪ ಸಂಗೀತ ಸಭಾ ಸ್ಥಾಪಿಸಿ ಸುಳ್ಯದಲ್ಲಿ ಅನೇಕ ಸಂಗೀತ ಸಭೆಗಳನ್ನು ನಡೆಸಿದ್ದಾರೆ.
ವಿದ್ವಾನ್ ಹರಿಹರ ಬಾಯಾಡಿ
ಕೋವಿಡ್ಗೆ ಮುನ್ನ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರತಿ ತಿಂಗಳು ಸಂಗೀತ ಕಛೇರಿಗಳನ್ನು ಆಯೋಜಿಸಿ ಸಂಗೀತಾಸಕ್ತರ ಮನ ತಣಿಸಿದ್ದರು.ಈ ಸಂಗೀತ ಸಭಾಗಳಲ್ಲಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅನೇಕ ಕಲಾವಿದರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಯೋಗೇಶ್ ಶರ್ಮ ಬಳ್ಳಪದವು, ಉಷಾ ಈಶ್ವರ ಭಟ್, ಶಂಕರಿಮೂರ್ತಿ ಬಾಳಿಲ.. ಹೀಗೆ ಹಲವು ಕಲಾವಿದರು ನಾದಮಂಟಪ ಸಂಗೀತ ಸಭಾದಲ್ಲಿ ಸಂಗೀತ ಸುಧೆ ಹರಿಸಿದ್ದಾರೆ.
ಸಂಗೀತಗಾರರಾಗಿದ್ದ ಸುಳ್ಯ ಪರಿಸರದಲ್ಲಿ ‘ಸಂಗೀತ ಮಾಸ್ಟರ್’ ಎಂದೇ ಕರೆಯಲ್ಪಡುತ್ತಿದ್ದ ತಂದೆ ಗೋಪಾಲಕೃಷ್ಣ ಬಾಯಾಡಿಯವರಿಂದ ದೊರೆತ ಸಂಗೀತವನ್ನು ಹರಿಹರ ಬಾಯಾಡಿಯವರು ತನ್ನ ವೃತ್ತಿ ಜೀವನದ ಅವಧಿಯಲ್ಲಿ ಹೆಚ್ಚಾಗಿ ಕರಗತ ಮಾಡಿಕೊಂಡರು. ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಂಗೀತ ಗುರು ತ್ರಿಪುಣಿತುರ ಗೋಪಾಲಕೃಷ್ಣ ಅಯ್ಯರ್ ಅವರಿಂದ ಸಂಗೀತ ಅಭ್ಯಾಸ ಮಾಡಿದರು.ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ಕದ್ರಿ ಗೋಪಾಲನಾಥ್ ಅವರು ಆ ಸಮಯದಲ್ಲಿ ಸಹಪಾಠಿಯಾಗಿದ್ದರು ಎಂದು ಹರಿಹರ ಬಾಯಾಡಿಯವರು ನೆನಪಿಸಿಕೊಳ್ಳುತ್ತಾರೆ. ಬಳಿಕ ಹಲವು ಕಡೆಗಳಲ್ಲಿ ವೃತ್ತಿ ನಿರತರಾರ ಸಂದರ್ಭದಲ್ಲಿ ಸಂಗೀತವನ್ನು ಹೆಚ್ಚು ಹೆಚ್ಚು ಕಲಿತರು.ತನ್ನ ಜೀವನದುದ್ದಕ್ಕೂ ಸಂಗೀತವನ್ನು ಜೊತೆಯಾಗಿಸಿದರು. ಮೈಸೂರಿನಲ್ಲಿ ಸುಮಾರು 18 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದ ಸಂಗೀತ ಸಭಾಗಳಲ್ಲಿ ಸಂಗೀತ ಕಚೇರಿಗಳನ್ನು ಹೆಚ್ಚು ಕೇಳುತ್ತಿದ್ದರು. ಇದು ಸಂಗೀತ ಕ್ಷೇತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಯಿತು.
36 ವರ್ಷಗಳ ಸೇವೆಯ ನಂತರ 2004 ರಲ್ಲಿ ನಿವೃತ್ತರಾದರು. ನಿವೃತ್ತರಾದ ಬಳಿಕ ಪೂರ್ತಿಯಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ನಾದ ಮಂಟಪ ಸಂಗೀತ ಶಾಲೆ ಆರಂಭಿಸಿ ಸಣ್ಣ ಮೊತ್ತದ ಗುರು ದಕ್ಷಿಣೆಯಷ್ಟೇ ಪಡೆದುಕೊಂಡು ಸಂಗೀತ ಕಲಿಸಿದರು. ಸಂಗೀತ ಸಭಾದ ಮೂಲಕ ಹಲವಾರು ಮಂದಿ ಕಲಾವಿದರಿಗೆ ವೇದಿಕೆ ಒದಗಿಸಿದರು.
ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡ ತರಗತಿಗಳನ್ನು ನಂತರ ಹಲವು ಹಿತೈಷಿಗಳ ಬೇಡಿಕೆಯಿಂದ ಮತ್ತೆ ಪ್ರಾರಂಭಿಸಿದ್ದಾರೆ. ಮತ್ತೆ ಸಂಗೀತ ಸಭಾಗಳನ್ನೂ ಆರಂಭಿಸುವ ಚಿಂತನೆಯೂ ಇದೆ ಎನ್ನುತ್ತಾರೆ ಅವರು.
ಹರಿಹರ ಬಾಯಾಡಿ ಮತ್ತು ನಾದಮಂಡಪ ಹೊಸ ತಲೆಮಾರಿಗೆ ಸಂಗೀತವನ್ನು ಧಾರೆಯೆರೆಯುತ್ತಾ ಸಪ್ತಸ್ವರ ರಾಗಸುಧೆ ಹರಿಸುತ್ತಿದ್ದಾರೆ.
ತನ್ನ ನಿವೃತ್ತಿಯ ಬಳಿಕ ಸಂಗೀತಗಾರರ ಕುರಿತ ‘ಮಹಾನುಭಾವರು ‘ಎಂದರೋ ಮಹಾನುಭಾವುಲು..’ ‘ಅಂಚೆಮನೆಯ ರಸ ನಿಮಿಷಗಳು’ ಸೇರಿಕೆಲವು ಪುಸ್ತಕಗಳನ್ನು ರಚಿಸಿದ್ದಾರೆ ಬಾಯಾಡಿಯವರು.
ಪತ್ನಿ ಮನೋರಮ ಹಾಗೂ ಮಕ್ಕಳಾದ ಶ್ರೀದೇವಿ ಮತ್ತು ವೇಣುಗೋಪಾಲ್ ಇವರಿಗೆ ಪ್ರೋತ್ಸಾಹವಾಗಿ ಜೊತೆಯಲ್ಲಿದ್ದಾರೆ. ಅಂಚೆ ಇಲಾಖೆಯಲ್ಲಿ ಸೇವೆಯಲ್ಲಿದ್ದಾಗ ಉತ್ತಮ ಅಂಚೆ ವಿಭಾಗ ಪ್ರಶಸ್ತಿ, ವೈಯುಕ್ತಿಕ ಪ್ರಶಸ್ತಿ ಪಡೆದಿದ್ದ ಅವರಿಗೆ ಸಂಗೀತ ಸೇವೆಗಾಗಿ ದ.ಕ.ಕನ್ನಡ ಸಾಹಿತ್ಯ ಪರಿಷತ್ನ ಸನ್ಮಾನ, ಸುಳ್ಯದ ಸ್ನೇಹ ಪ್ರಶಸ್ತಿ, ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಸುಳ್ಯ ತಾಲೂಕು ಕಶ್ಯಪ್ ಸಭಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳೂ ಬಂದಿದೆ.