ಸುಳ್ಯ:ದುಶ್ಚಟ ಮುಕ್ತ ಸಮಾಜಕ್ಕಾಗಿ ಹಾಗೂ ಮದ್ಯಮುಕ್ತ ನಾಡಿಗಾಗಿ ಜನಜಾಗೃತಿ ವೇದಿಕೆ ನಿರಂತರ ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತಾ ಬಂದಿದೆ. ವೇದಿಕೆಯು ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ ಕಾರ್ಯಪ್ರವೃತ್ತವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ದ. ಕ. ಜಿಲ್ಲೆ-02, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ದ.ಕ ಜಿಲ್ಲೆ ಇದರ ವತಿಯಿಂದ ಸುಳ್ಯದ ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಅ.3ರಂದು ನಡೆದ
ಗಾಂಧಿಸ್ಮೃತಿ, ಜನಜಾಗೃತಿ ಜಾಥಾ ಮತ್ತು ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಹಲವು ದಶಕಗಳಿಂದ ಜನಜಾಗೃತಿ ವೇದಿಕೆಯ ವತಿಯಿಂದ ಜಾಗೃತಿ ಮೂಡಿಸಿ ಮದ್ಯಮುಕ್ತ ಸಮಾಜ ರೂಪಿಸಲು ನಿರಂತರ ಪ್ರಯತ್ನ ನಡೆಸುತ್ತಾ ಬಂದಿದೆ. ಮನಸ್ಸನ್ನು ಪರಿವರ್ತನೆ ಮಾಡುವ ಮೂಲಕ ಹಲವಾರು ಮಂದಿ ಮದ್ಯಮುಕ್ತರಾಗಿ ನವಜೀವನ ಆರಂಭಿಸಿ ಸಂತಸದ ಜೀವನ ನಡೆಸುತ್ತಿದ್ದಾರೆ. ದುಶ್ಚಟ ಮುಕ್ತ ಜೀವನ ನಡೆಸಲು ಸಂಕಲ್ಪ ಶಕ್ತಿ ಬೇಕು. ದುಶ್ಚಟದಿಂದ ದೂರ ಇರಲು ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಡಬೇಕಾಗಿದೆ. ಸ್ವಇಚ್ಚೆಯಿಂದ ಮನೋಬಲವನ್ನು ಹೆಚ್ಚಿಸಿ ದುಶ್ಚಟದಿಂದ ದೂರ ಇರುವ ಪ್ರಯತ್ನ ಎಲ್ಲರೂ ಮಾಡಬೇಕು ಎಂದು ಅವರು ಕರೆ ನೀಡಿದರು.
ಸಮಾವೇಶವನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ’ ಮಹಾತ್ಮ ಗಾಂಧಿ ಅವರ ಗ್ರಾಮ ರಾಜ್ಯದ ಕನಸು ನನಸಾಗಬೇಕಾದರೆ ಮದ್ಯಪಾನ ಮುಕ್ತ ಸಮಾಜ ನಿರ್ಮಾಣ ಆಗಬೇಕು. ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸವೇಕು ಎಂದು ಹೇಳಿದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲದ ಪರಮಹಂಸ ಸ್ವಾಮೀಜಿ ದೇಶ ದುಶ್ಚಟಮುಕ್ತ ಆಗಬೇಕು, ಸ್ವಸ್ಥ ಸಮಾಜ ನಿರ್ಮಾಣ ಆಗಬೇಕು ಎಂಬ ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡುವ ಕೆಲಸ ಧರ್ಮಸ್ಥಳದ ಮೂಲಕ ನಡೆಸಲಾಗುತಿದೆ.ಜನಜಾಗೃತಿ ವೇದಿಕೆಯ ಮೂಲಕ ಹಲವು ಕುಟುಂಬಗಳು ಸಂತೃಪ್ತ ಜೀವನ ನಡೆಸುತಿದೆ ಎಂದು ಹೇಳಿದರು. ಈ ದೇಶದ ಸಂಸ್ಕೃತಿ, ಸತ್ವ, ಪರಂಪರೆಯನ್ನು ಜೀವನದಲ್ಲಿ ಅಳವಡಿಸಬೇಕು. ಮಕ್ಕಳಲ್ಲಿ ಧರ್ಮಪ್ರಜ್ಞೆ, ತ್ಯಾಗ ಮತ್ತು ಸೇವಾ ಮನೋಭಾವವನ್ನು ಉದ್ದೀಪನಗೊಳಿಸಬೇಕು ಎಂದು ಹೇಳಿದರು.
ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ನ ಧರ್ಮಗುರು ಫಾ.ವಿಕ್ಟರ್ ಡಿಸೋಜ ಸಂದೇಶ ನೀಡಿ ‘ಮದ್ಯಪಾನ ಮುಕ್ತ, ದುಶ್ಚಟ ಮುಕ್ತ ಆದರೆ ಮಾತ್ರ ಸುಂದರ ಮತ್ತು ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ. ಆಗ ಮಾತ್ರ ಗಾಂಧೀಜಿ ಅವರು ಕನಸು ಕಂಡ ಸತ್ಯದ, ಅಹಿಂಸೆಯ ಸಮೃದ್ಧ ದೇಶ ಕಟ್ಟಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ’ ಮದ್ಯಪಾನ ಮುಕ್ತ ನಾಡು ಕಟ್ಟುವ ಅಗತ್ಯ ಇದೆ ಎಂದರು. ಮದ್ಯಪಾನದಿಂದ ಆರೋಗ್ಯ ಸಮಸ್ಯೆ ಮತ್ತು ಅಪಘಾತದಿಂದ ಪ್ರತಿ ವರ್ಷ 2.6 ಲಕ್ಷ ಮಂದಿ ಸಾಯುತ್ತಿದ್ದಾರೆ. ಜೊತೆಗೆ ಮಾದಕ ವಸ್ತುಗಳ ಹಾವಳಿಯಿಂದ ಹಲವರು ತಮ್ಮ ಬದುಕನ್ನು ಹಾಳು ಮಾಡುತ್ತಿದ್ದಾರೆ. 5 ವರ್ಷದಲ್ಲಿ 1.5 ಲಕ್ಷ ಪ್ರಕರಣಗಳು ದಾಖಲಾಗಿದೆ.ಯುವ ಜನಾಂಗದಲ್ಲಿ ಮೊಬೈಲ್ ಗೀಳು ಹೆಚ್ಚಾಗುತಿರುವುದು ಆತಂಕಕಾರಿ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಮೂ. ಕೊರವಿ ಸಾಧಕರನ್ನು ಸನ್ಮಾನಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಲ್.ಹೆಚ್.ಮಂಜುನಾಥ್,
ಹುಬ್ಬಳ್ಳಿಯ ನೆಹರು ಆರ್ಟ್ಸ್ ಸೈನ್ಸ್ ಕಾಮರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ಯೂಸುಫ್ ಪೈಚಾರು, ಮುಂಬೈಯ ಉದ್ಯಮಿ ಆರ್ ಬಿ ಹೆಬ್ಬಳ್ಳಿ, ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ. ಹೆಚ್. ಸುಧಾಕರ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರು, ಸುಳ್ಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಉಡುಪಿ ಕರಾವಳಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ,ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಪಿ ಭಾಗವಹಿಸಿದ್ದರು.
ಮಹೇಶ್ ಕುಮಾರ್ ರೈ ಮೇನಾಲ, ಸಾಜ ರಾಧಾಕೃಷ್ಣ ಆಳ್ವ, ರೊನಾಲ್ಡ್ ಡಿಸೋಜ, ಸತೀಶ್ ಹೊನ್ನಳ್ಳಿ, ನವೀನ್ ಚಂದ್ರ, ಸಂತೋಷ್ ಕೇನ್ಯ, ಉದಯಕುಮಾರ್, ಯತೀಶ್ ರೈ ದುಗ್ಗಲಡ್ಕ, ಲೋಕೇಶ್ ಹೆಗ್ಡೆ, ಮಹೇಶ್ ಕೆ, ಜಯಪ್ರಕಾಶ್ ನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲೆ 02ರ ನಿರ್ದೇಶಕ ಪ್ರವೀಣ್ ಕುಮಾರ್ ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ಹಾಗೂ ಪೂಜಾಶ್ರೀ ಪೈಚಾರು ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ಜಾಗೃತಿ ಅಣ್ಣ, ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಆಪದ್ಭಾಂದವರಿಗೆ ಶೌರ್ಯ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಲಾಯಿತು. ನವಜೀವನ ಸಾಧಕ ಪ್ರಶಸ್ತಿಯ ವಿತರಣೆ, ವಿವಿಧ ಸೌಲಭ್ಯಗಳ ವಿತರಣೆಯನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ನೆರವೇರಿಸಿದರು.
ಬೃಹತ್ ಜನಜಾಗೃತಿ ಜಾಥಾ:
ಸಮಾವೇಶಕ್ಕೆ ಮುನ್ನ ಬೃಹತ್ ಜನಜಾಗೃತಿ ಜಾಥಾ ನಡೆಯಿತು.
ಕೊಂಬು ಕಹಳೆ, ವಾದ್ಯ ಮೇಳಗಳು, ಚೆಂಡೆ, ವಿವಿಧ ವೇಷಗಳು, ಸ್ತಬ್ದಚಿತ್ರಗಳು, ಕುಣಿತ ಭಜನೆಗಳು ಮೆರವಣಿಗೆಗೆ ಮೆರುಗು ನೀಡಿತು
ಸುಳ್ಯದ ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಪ್ರಧಾನ ರಸ್ತೆಯ ಮೂಲಕ ಸಭಾಭವನದ ತನಕ ನಡೆದ ಜಾಥಾದಲ್ಲಿ ತಾಲೂಕಿನ ಭಜನಾ ತಂಡಗಳು,ನವಜೀವನ ಸಮಿತಿಯ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಜನಜಾಗೃತಿ ಸಮಿತಿಯ ಸದಸ್ಯರು ಹಾಗೂ ಯೋಜನೆಯ ಸಂಘದ ಸದಸ್ಯರು ಸೇರಿ ಸಾವಿರಾರು ಮಂದಿ ಭಾಗವಹಿಸಿದ್ದರು.