ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಶುಕ್ರವಾರ ದಸರೆಯ ಸಂಭ್ರಮಕ್ಕೆ ‘ಗಜ ಪಯಣ’ಕ್ಕೆ ಚಾಲನೆ ನೀಡಲಾಯಿತು.ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಜಿಲ್ಲಾ
ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಪುಷ್ಪಾರ್ಚನೆ ಮಾಡಿ ಗಜ ಪಯಣಕ್ಕೆ ಚಾಲನೆ ನೀಡಿದರು. ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಬಳ್ಳೇ ಶಿಬಿರದ ‘ಅರ್ಜುನ’, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ‘ಧನಂಜಯ’, ‘ಗೋಪಿ’, ‘ವಿಜಯಾ’, ‘ಕಂಜನ್’, ಭೀಮನಕಟ್ಟೆ ಆನೆ ಶಿಬಿರದ ‘ವರಲಕ್ಷ್ಮಿ’ ಆನೆಗಳನ್ನು ಬಣ್ಣ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು. ಮೊದಲ ತಂಡದಲ್ಲಿ 7 ಗಂಡು ಹಾಗೂ 2 ಹೆಣ್ಣಾನೆಗಳಿದ್ದವು.
ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಜಾಹ್ನವಿ, ಎಎಸ್ ಪಿ ನಂದಿನಿ, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಡಿಸಿಎಫ್ ಗಳಾದ ಸೌರಭ್ ಕುಮಾರ್, ಬಸವರಾಜು ಇದ್ದರು.