*ಎಂ.ನಾ.ಚಂಬಲ್ತಿಮಾರ್.
ಮೊನ್ನೆ ಮೊನ್ನೆ ನಮ್ಮೂರಿನ ಪುಟ್ಟ ಹೋಟೆಲೊಂದರಲ್ಲಿ ಜಡಿಮಳೆಯ ವೇಳೆ ಬೆಚ್ಚಗೊಂದು ಚಾ ಹೀರುತ್ತಾ ಹರಟುತ್ತಿದ್ದೆ. ಆಗ ಅಲ್ಲಿಗೆ ಬಂದ ಅಪರಿಚಿತ ಗುಂಪಿನಲ್ಲಿದ್ದ ಹಿರಿಯರೊಬ್ಬರು ಕನ್ನಡ ದಿನಪತ್ರಿಕೆಗಳನ್ನು ಕೈಗೆತ್ತಿಕೊಂಡು ಮೂರ್ನಾಲ್ಕು ನಿಮಿಷದಲ್ಲಿ ಅಷ್ಟೂ ಪುಟಗಳನ್ನು ತಿರುವಿ ಹಾಕಿ ನಿಟ್ಟುಸಿರಿಟ್ಟರು. ” ಈಗೀಗ ಪತ್ರಿಕೆಗಳಲ್ಲಿ ಎಂಥದೂ ಮೌಲ್ಯದ ಸುದ್ದಿಗಳಿಲ್ಲ ಮಾರಾಯ್ರೇ..! ಸರಕಾರಗಳನ್ನು ಹೊಗಳಿ ಪ್ರಚಾರ ನೀಡುವುದು, ದುಡ್ಡು ಕೊಟ್ಟವರನ್ನು ಹಾಡಿಹೊಗಳಿ ಪುಟಗಟ್ಲೆ ಜಾಹೀರಾತು ಪ್ರಕಟಿಸುವುದು. ಜನರು ಓದಲೇ ಬೇಕಾದ, ಆಡಳಿತಗಾರರನ್ನು ಎಚ್ಚರಿಸುವ ಸಾಮಾನ್ಯ ಜನರ ಸುಖಃ ದುಖಃದ, ಬದುಕಿನ ಬವಣೆಯ ಊರ ಕತೆಗಳು ಎಲ್ಲಿದೆ..? ಅವರು ಗುಣಗುತ್ತಲೇ
ಇದ್ದರು. ಆಗ ಅವರ ಜೊತೆಗಿದ್ದವರು ಹೇಳಿದ್ರು ” ಅಲ್ಲಯ್ಯಾ ಅದರ ಬಗ್ಗೆ ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ.. ಬಿಟ್ಬಿಡಿ, ಈಗ ಎಲ್ಲಾ ಸೋಷ್ಯಲ್ ಮೀಡಿಯ ಅಲ್ವಾ.. ಎಂದರು..! ಈ ಮಾತುಗಳನ್ನು ಕೇಳುತ್ತಲೇ ನನ್ನ ಬೆಚ್ಚನೆಯ ಚಾ ತಣಿದೇ ಹೋಯಿತು.., ಅದರ ರುಚಿಯೂ ಕೆಟ್ಟಿತು..! ಹೊರಗಿನ ಜಡಿಮಳೆ ಟಪಟಪ ನೆಲಕ್ಕೆ ಹೊಡೆಯುವಂತೆ ಭಾಸವಾಯಿತು.ಇದು ಈ ವರ್ತಮಾನದ ಪತ್ರಿಕೆಗಳ ನೆತ್ತಿಗೆಸದ ಕಲ್ಲು. ಆದರೆ ಪತ್ರಿಕೋದ್ಯಮವನ್ನು ಒಂದು ಆಸಕ್ತಿಯ, ಆದರ್ಶದ ಸಮಾಜಮುಖಿ ಕಾಯಕವಾಗಿ ನಂಬಿದ ನಮ್ಮಂಥವರ ಮನಸ್ಸಾಕ್ಷಿಯನ್ನೇ ಪ್ರಶ್ನಿಸುವ, ಕಲ್ಲೂ ಹೌದು. ಇಂಥ ಮಾತುಗಳು ಇಂದು ಓದುಗೆರೆಡೆಯಿಂದ ಯಾವುದೇ ಊರಲ್ಲೂ ಕೇಳಬಹುದು. ಇದು ಓದುಗರ ವ್ಯಥೆಯ ಮಾತು. ಇಂಥ ಓದುಗರನ್ನು, ಅವರ ಅನಿಸಿಕೆಗಳನ್ನು ನಿರ್ಲಕ್ಷಿಸಿದರೆ ಮುದ್ರಣ ಮಾಧ್ಯಮಗಳಿಗೆ ನಾಳೆ ಓದುಗರೆಲ್ಲಿಂದ..? ಟೀಕೆ, ವಿಮರ್ಶೆಗಳು ಧ್ವೇಷದಿಂದಷ್ಟೇ ಅಲ್ಲ ಪ್ರೀತಿಯ ಕಾಳಜಿಯಿಂದಲೂ ಹುಟ್ಟುತ್ತದೆ. ಇದು ಓದುಗರೊಬ್ಬರ ಪ್ರೀತಿಯ ಮಾತು ತಾನೇ..? ಹೌದು.., ಕೊರೋನ ನೆಪವೊಡ್ಡಿ ಕ್ರಿಯಾಶೀಲ ಪತ್ರಕರ್ತರನೇಕರನ್ನು ಉದ್ಯೋಗ ವಂಚಿತರನ್ನಾಗಿಸಿ ಮನೆಗಟ್ಟಿದ ಪತ್ರಿಕೋದ್ಯಮ ಆ ಕಾಲದ ನಷ್ಟದ ಹೆಸರಲ್ಲಿ
ಸ್ಥಗಿತಗೊಳಿಸಿದ್ದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಪುರವಣಿ ಸಹಿತ ಪ್ರಾದೇಶಿಕ ಸುದ್ದಿಗಳನ್ನು. ಬಹುತೇಕ ಪತ್ರಿಕೆಗಳೂ ಪ್ರಾದೇಶಿಕ ಸುದ್ದಿ ಪುಟಗಳನ್ನೇ ಕಡಿತಗೊಳಿಸಿತು. ಪರಿಣಾಮ ನಾಗರಿಕರ ನಡುವಣ ಮಾನುಷಿಕ ಸುದ್ದಿ ವಿದ್ಯಮಾನಗಳು ಇಂದು ಪತ್ರಿಕೆಗಳಿಗೆ ಬೇಡವಾಗಿವೆ. ಅದಕ್ಕೆ ರಾಜಕೀಯ ಮತ್ತು ಆಡಳಿತದ ಬೆಳವಣಿಗೆ, ವಿದ್ಯಮಾನಗಳ ಸುದ್ದಿಯಷ್ಟೇ ಸಾಕಾಗಿದೆ. ಅದನ್ನು ರೋಚಕತೆಯಿಂದ ಅರೋಚಕವಾಗಿ ಬಿಂಬಿಸಿ ಮನುಷ್ಯ ಮನೋಸ್ವಸ್ಥತೆಗಳನ್ನು ಕದಡಿಸುವ ಮಟ್ಟಕ್ಕೂ ಮಾಧ್ಯಮಗಳು ಕಾಲೂರಿದೆ ಎಂದ್ರೆ ಪ್ರಜಾಪ್ರಭುತ್ವದ ರಕ್ಷಣೆಯ ಯೋಧರಂತೆ ಕಾವಲಾಳಾಗಿದ್ದ ಮಾಧ್ಯಮಗಳು ತನ್ನ ಉದ್ಯಮದ ಪೋಷಾಕಿನಲ್ಲಿ ಕರ್ತವ್ಯದ ಜವಾಬ್ದಾರಿಯನ್ನೇ ಮರೆತುಬಿಟ್ಟಿದೆ ಎಂದರ್ಥವಲ್ವೇ..?
ಇಷ್ಟಕ್ಕೂ ಪತ್ರಿಕೆಗಳನ್ನು ಓದುವವರು ಯಾರು..? ಶ್ರೀಮಂತಿಕೆಯ ವೈಭೋಗದಲ್ಲಿರುವ ಉದ್ಯಮ, ವಾಣಿಜ್ಯ ಕ್ಷೇತ್ರದಲ್ಲಿರುವವರೆಲ್ಲಾ ಓದುಗರಲ್ಲ. ಸಮಾಜದ ತಳಮಟ್ಟದ ಶ್ರಮಿಕ ವರ್ಗದವರೆಲ್ಲರೂ ಓದುಗರಲ್ಲ. ಆದರೆ ಮಧ್ಯಮ ಹಂತದ ಶಿಕ್ಷಿತ ವಲಯದವರೇ ಬಹುಪಾಲು ಓದುಗರು. ಓದುಗರಿಗೆ ರಾಜಕೀಯವಷ್ಟೇ ಅಲ್ಲ ಅದರ ಜೊತೆ ನಾಡು-ನುಡಿ, ಕಲೆ-ಸಂಸ್ಕೃತಿ ಮತ್ತು ಬದುಕಿನ ಕಷ್ಟ ಕಾರ್ಪಣ್ಯಗಳ ನೈಜ ವಿದ್ಯಾಮಾನಗಳ ಕುರಿತು ಆಸಕ್ತಿ ಇರುತ್ತದೆ. ನಮ್ಮದೇ ನಾಡಿನ ಕೌತುಕದ, ಮಾನವಾಸಕ್ತಿಯ ಸುದ್ದಿ ಅಪೇಕ್ಷಣೀಯ. ಸಮಾಜದ ನಡುವೆ ಹದ್ದುಗಣ್ಣಿಟ್ಟು ಇದನ್ನೆಲ್ಲಾ ಎಚ್ಚರದಿಂದ ವೀಕ್ಷಿಸುತ್ತಲೇ ಇರಬೇಕಾದ ಪತ್ರಕರ್ತ ಸಾಮಾಜಿಕ ಸ್ವಾಸ್ಥ್ಯದ ಪ್ರಜ್ಞೆಯಿಂದ ಮಾನುಷಿಕವಾಗಿ ಯೋಚಿಸಿ ಜನತಾ ನ್ಯಾಯಕ್ಕಾಗಿ ವರದಿಗಾರಿಕೆಯ ಮೂಲಕ ಹೋರಾಡಬೇಕು. ಇದು ಪತ್ರಕರ್ತನಿಗಿರಬೇಕಾದ ಕರ್ತವ್ಯ ಬದ್ಧತೆ.
ಆದರೆ ಇಂದು ಪತ್ರಿಕೋದ್ಯಮ ಉದ್ಯಮಶಾಹೀ ಬಂಡವಾಳ ಹೂಡಿಕೆಯವರ ವ್ಯವಸಾಯ ಆಗಿರುವ ದಿನದಲ್ಲಿ ನಮ್ಮ ಹಳ್ಳಿಯ ಸುದ್ದಿ, ಹಳ್ಳಿ ಬದುಕಿನ ಕತೆ-ವ್ಯಥೆ ಕೇಳೋರಾರು..? ಇದು ವರ್ತಮಾನದ ಗೋಳು. ಈ ಕಾರಣದಿಂದಲ್ಲವೇ ಹೋಟೆಲಿನಲ್ಲಿ ಚಾ ಕುಡಿಯಲು ಬಂದ ಅಪರಿಚಿತ ಓದುಗ ಪತ್ರಿಕೆ, ಪತ್ರಿಕೋದ್ಯಮವನ್ನು ನಿರ್ದಯವಾಗಿ ದಾಕ್ಷಿಣ್ಯ ರಹಿತತೆಯಿಂದ ಬೈದದ್ದು. ನಮ್ಮ ಕನ್ನಡ ಸೇರಿ ಅನೇಕ ಭಾಷಾ ಪತ್ರಿಕೆಗಳ ಮಟ್ಟಿಗಂತೂ ಇದು ಸತ್ಯ. ನಮ್ಮಲ್ಲಿ ಸುದ್ದಿಮನೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ಬಹುತೇಕ ರಾಜಕಾರಣಿಗಳ ಮತ್ತು ಬಂಡವಾಳ ಹೂಡಿಕೆದಾರರ ಕೈಯ್ಯಲ್ಲಿದೆ. ಸಂಪಾದಕ ಅಲ್ಲೊಬ್ಬ ನೌಕರ! ಆದ್ದರಿಂದ ಮಾಧ್ಯಮಗಳು ಸಾಮಾಜಿಕ, ನೈತಿಕ ಜವಾಬ್ದಾರಿಯ ಕರ್ತವ್ಯಗಳನ್ನು ಬಲಿಕೊಟ್ಟಿದೆ. ಬದಲು ಆಡಳಿತಶಾಹಿ, ವಾಣಿಜ್ಯ ದೃಷ್ಟಿಯ ಸ್ವಾಮಿನಿಷ್ಠೆಯನ್ನು ಪ್ರಕಟಿಸುತ್ತಿದೆ. ಈ ಕಾರಣದಿಂದಲೇ ಹಳ್ಳಿ ಜನತೆಯ ಸುದ್ದಿ ವಿದ್ಯಾಮಾನಗಳು, ಕಲೆಸಾಹಿತ್ಯ ಸಾಂಸ್ಕೃತಿಕ ವಿಚಾರಗಳು ಆರ್ಥಿಕ ಲಾಭದಾಯಕವಲ್ಲದ ‘ಸರಕುಗಳಾಗಿವೆ. ಹಿಂದೆ ಪತ್ರಿಕೆಗಳಿಗೆ ಓದುಗರೇ ದೇವರಾಗಿದ್ದರು. ಆದರಿಂದು ಪ್ರಭುತ್ವವೇ ದೇವರಾಗಿವೆ!
ವರ್ತಮಾನದ ಮಾಧ್ಯಮಗಳು ಹೇಗಿವೆ ಎಂದರೆ ಒಂದೆಡೆ ಆಡಳಿತಾರೂಢ ವ್ಯವಸ್ಥೆಯನ್ನು ಹೊಗಳುವ, ಸಮರ್ಥಿಸುವ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಅಭಿಪ್ರಾಯ ವ್ಯತ್ಯಾಸ, ಭಿನ್ನ ಮಾತುಗಳನ್ನು ನಿರಾಕರಿಸುವ, ತೇಜೋವಧಿಸುವ ಪ್ರಯತ್ನಕ್ಕೂ ಮುಂದಾಗುತ್ತಿವೆ. ಜನಸಾಮಾನ್ಯರ ಧ್ವನಿಯಾಗಿ ಅವರ ಬೇಕು, ಬೇಡಗಳಿಗೆ ಸ್ಪಂದಿಸಬೇಕಾಗಿದ್ದ ಮಾಧ್ಯಮಗಳು ತಾವು ಪ್ರಜಾಸತ್ತೆಯ ಕಾವಾಲಾಳುಗಳು ಎಂಬುದನ್ನೇ ಮರೆತಿವೆ. ಬದಲು ‘ನುಡಿ’ಯ ವ್ಯಾಪಾರದ ಮಹಲು ಕಟ್ಟುತ್ತಿದೆ! ಮನುಷ್ಯರಿಗೊಂದು ಬದುಕಿದೆ. ಆ ಬದುಕಿಗೂ ಕತೆ-ವ್ಯಥೆಗಳಿವೆ. ಇದಕ್ಕೆ ಸಂಬಂಧಗಳೇ ಇಲ್ಲದ, ಜೀವನದ ಜತೆಗಿನ ಭಾಂಧವ್ಯಗಳೇ ಇಲ್ಲದ ಸುದ್ದಿಗಳನ್ನು ಬಿತ್ತರಿಸಿದರೆ ಮಾಧ್ಯಮಗಳು ಜನಸ್ನೇಹಿಯಾಗುವುದು ಹೇಗೆ..? ಈ ಕಾರಣದಿಂದ ಓದುಗರು ಮಾಧ್ಯಮಗಳಿಗೆ ಶಪಿಸತೊಡಗಿದ್ದಾರೆ. ಆದರೆ ಜನರು ಮತ್ತು ಮಾಧ್ಯಮ ಸಂಸ್ಥೆಯ ನಡುವಣ ಕೊಂಡಿಯಾಗಿದ್ದ ಪತ್ರಕರ್ತರು ಇದನ್ನು ಕೇಳಿಸುತ್ತಲೇ ತಮ್ಮ ವೃತ್ತಿ ಸುರಕ್ಷತೆಯಿಂದ ಪಥ ಬದಲಿಸುತ್ತಿದ್ದಾರೆ. ವೃತ್ತಿ ಗೌರವ ಕಳಕೊಳ್ಳುತ್ತಿದ್ದಾರೆ..
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)