ಬಂದಡ್ಕ:ಕೇರಳದ ಹಾಗೂ ಕರ್ನಾಟಕದ ಭಾಷಾ ಸಾಂಸ್ಕೃತಿಕ ಅಕಾಡೆಮಿಗಳನ್ನು ಒಟ್ಟು ಸೇರಿಸಿ ಕಾಸರಗೋಡಿನಲ್ಲಿ ಅಕಾಡೆಮಿಗಳ ಮಹಾ ಸಮ್ಮೇಳನ ನಡೆಸುವ ಆಶಯ ಇದೆ ಎಂದು ಉದುಮ ಶಾಸಕ ಸಿ.ಎಚ್.ಕುಂಞಂಬು ಹೇಳಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗು ಬಂದಡ್ಕ ಗ್ರಾಮ ಗೌಡ ಸಮಿತಿ ವತಿಯಿಂದ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾ ಮಂಟಪದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವದ
ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಶಾಸಕನಾಗಿದ್ದ ಅವಧಿಯಲ್ಲಿ ತುಳು ಅಕಾಡೆಮಿ, ಯಕ್ಷಗಾನ ಅಕಾಡಮಿ ಸೇರಿ ನಾಲ್ಕು ಅಕಾಡೆಮಿಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ.ಬಂದಡ್ಕದಲ್ಲಿ ನಡೆದ ಗಡಿನಾಡ ಉತ್ಸವ ಅಕಾಡೆಮಿಗಳಿಗೆ ಉತ್ತಮ ಕಾರ್ಯಕ್ರಮ ರೂಪಿಸಲು ಪ್ರೇರಣೆ ಎಂದರು.
ಸಮಾರೋಪ ಭಾಷಣ ಮಾಡಿದ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ’ ಅರೆಭಾಷೆಯ ಬೆಳವಣಿಗೆಗೆ ಅಕಾಡೆಮಿ ದೊಡ್ಡ ಕೊಡುಗೆ ನೀಡಿದೆ. ನೂತನ ಅಕಾಡೆಮಿಯು ಭಾಷೆಯ ಬೆಳವಣಿಗೆಗೆ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸಬೇಕು ಎಂದರು.
ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಸುಳ್ಯ ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ ಭಾಷೆಯನ್ನು ನಿರಂತರ ಬೆಳೆಸಬೇಕು, ಆಗ ಭಾಷೆ ಉಳಿಯುತ್ತದೆ ಮತ್ತು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಮಾತನಾಡಿ’ ಗಡಿ ಗ್ರಾಮಗಳಲ್ಲಿ ಅರೆಭಾಷೆಯ ಅಭಿವೃದ್ಧಿಗೆ ಪೂರಕವಾಗಿ ಕೇರಳದಲ್ಲಿ ಕೂಡ ಅರೆಭಾಷೆ ಅಕಾಡೆಮಿ ಆಗುವ ಪ್ರಯತ್ನ ನಡೆಯಬೇಕು. ಕಣ್ಣೂರು ವಿವಿಯಲ್ಲಿ ಅರೆಭಾಷೆ ಅಧ್ಯಯನ ಪೀಠ ಆರಂಭಿಸಲು ಪ್ರಯತ್ನ ನಡೆಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ ಮಾತನಾಡಿ ಅರೆಭಾಷೆ ಅಕಾಡೆಮಿ ಸ್ಥಾಪನೆ ಮಾಡಲು ಗೌಡರ ಯುವ ಸೇವಾ ಸಂಘ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು. ಅರೆಭಾಷೆ ಮಕ್ಕಳಿಗೆ ಕಲಿಸಬೇಕು, ಆ ಮೂಲಕ ಭಾಷೆ ಬೆಳೆಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ‘ಗಡಿನಾಡಿನಲ್ಲಿ ಅರೆಭಾಷಿಕರ ಹಾಗೂ ಅರೆಭಾಷೆಯ ಹುಮ್ಮಸ್ಸನ್ನು ಹೆಚ್ಚಿಸುವ ನಿಟ್ಟಿನಿಂದ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ 6 ಕಡೆಗಳಲ್ಲಿ ಗಡಿನಾಡ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡಿದೆ. ಬಂದಡ್ಕದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದೆ ಮಂಡೆಕೋಲು ಹಾಗೂ ಕಲ್ಲಪ್ಪಳ್ಳಿ ಮತ್ತು ಕೊಡಗು ಜಲ್ಲೆಯ ಗಡಿ ಪ್ರದೇಶಗಳಾದ ಚೆಯ್ಯಂಡಾಣೆ, ಭಾಗಮಂಡಲ ಹಾಗೂ ಕುಶಾಲನಗರದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಗಡಿ ಉತ್ಸವ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದರು.
ಸನ್ಮಾನ :
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ
ಮುತ್ತಣ್ಣ ಮಾಸ್ತರ್ (ಶಿಕ್ಷಣ, ಕ್ರೀಡಾ ಕ್ಷೇತ್ರ), ಮೋನಪ್ಪ ಗೌಡ ಇಳಂದಿಲ (ಸಹಕಾರ), ಬಾಲಕೃಷ್ಣ ಮಾಸ್ತರ್ (ಶಿಕ್ಷಣ), ಬೋಜಪ್ಪ ಗೌಡ ಪಾಲಾರುಮೂಲೆ (ಧಾರ್ಮಿಕ), ಪುರುಷೋತ್ತಮ ಬೊಡ್ಡನಕೊಚ್ಚಿ (ಸಮಾಜ ಸೇವೆ) ಧರ್ಮಾವತಿ ಪಾಲಾರುಮೂಲೆ (ಪ್ರಥಮ ಅರೆಭಾಷೆ ಮಹಿಳಾ ಜನಪ್ರತಿನಿಧಿ ಕುತ್ತಿಕೋಲು ಗ್ರಾ.ಪಂ),ಯಕ್ಷಿತ್ ಬಾಲೆಂಬಿ (ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು. ದಿ.ಗೋವಿಂದೇ ಗೌಡ ಸ್ಮರಣಾರ್ಥ ರಾಜ್ಯ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಸ.ಉ.ಹಿ.ಪ್ರಾ.ಶಾಲೆ ಕೋಲ್ಟಾರು ಇವರಿಗೆ ಅತ್ಯುತ್ತಮ ಗಡಿನಾಡ ಶಾಲೆಗೆ ಗೌರವಾರ್ಪಣೆ ನಡೆಸಲಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್, ಚಂದ್ರಶೇಖರ ಪೇರಾಲು, ತೇಜಕುಮಾರ್ ಕುಡೆಕಲ್ಲು, ಲೋಕೇಶ್ ಊರುಬೈಲು, ಪಿ.ಎಸ್.ಕಾರ್ಯಪ್ಪ, ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ, ಸಂದೀಪ್ ಪೂಕಳಕಂಡ, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚ್ಚನ, ಬಂದಡ್ಕ ಗ್ರಾಮ ಗೌಡ ಸಂಘದ ಅಧ್ಯಕ್ಷ ವೆಂಕಟ್ರಮಣ ಕೊಯಿಂಗಾಜೆ, ಪ್ರಧಾನ ಕಾರ್ಯದರ್ಶಿ ಚರಣ್ ಕುಮಾರ್ ಪಾಲಾರು ಮಾವಜಿ, ಕೋಶಾಧಿಕಾರಿ ಮೋಹನ್ ಇಳಂದಿಲ, ತರುಣ ಘಟಕದ
ಅಧ್ಯಕ್ಷ ಗಣೇಶ್ ಪಾಲಾರುಮೂಲೆ, ಮಹಿಳಾ ಘಟಕದ ಅಧ್ಯಕ್ಷೆ ಹಕ್ಷಿತಾ ಪಾಲಾರುಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಉಪನ್ಯಾಸಕಿ ಪಿ.ಬಿ. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಅರೆಭಾಷೆ ಗಡಿನಾಡ ಉತ್ಸವದ ಅಂಗವಾಗಿ ಬೆಳಗ್ಗಿನಿಂದ ಸಂಜೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಿತು.ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ, ಕವಿಗೋಷ್ಠಿ ನಡೆಯಿತು.