*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡುವ ನಗರ ಪಂಚಾಯತ್ನ ಕಲ್ಲುಮುಟ್ಲುವಿನ ನೀರು ಶುದ್ದೀಕರಣ ಘಟಕದ ‘ಫಿಲ್ಟರ್ ಬೆಡ್’ ನವೀಕರಣ ಕಾಮಗಾರಿ ಭರದಿಂದ ನಡೆಯುತಿದೆ. ಹಲವು ವರ್ಷಗಳ ಬಳಿಕ ಘಟಕದ ಫಿಲ್ಟರ್ ಬೆಡ್ ನವೀಕರಣ ನಡೆಯುತ್ತಿದ್ದು ನಗರಕ್ಕೆ ಕೆಸರು ಮಿಶ್ರಿತ ನೀರು ಬರುವುದಕ್ಕೆ ತಕ್ಕಮಟ್ಟಿನ ಪರಿಹಾರ ಆಗುವ ನಿರೀಕ್ಷೆ ಇದೆ. 13.5 ಲಕ್ಷ ರೂ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಯುತಿದೆ.ಫಿಲ್ಟರ್ ಬೆಡ್ನ ಲ್ಯಾಟರಲ್ ಪೈಪ್ಗಳು ಬದಲಾವಣೆ ಮಾಡಲಾಗಿದೆ. ಬಳಿಕ ಏಳು ಹಂತದಲ್ಲಿ ಹೊಳೆಯ ಕಲ್ಲು ಮತ್ತು
ಮರಳು ತುಂಬಿ ನವೀಕರಣ ಮಾಡಲಾಗುತ್ತದೆ. ಇಲ್ಲಿ ಸ್ವಾಭಾವಿಕವಾಗಿ ನೀರನ್ನು ಶುದ್ಧೀಕರಣ ಮಾಡಲಾಗುತಿದೆ.
ಕೆಳ ಭಾಗದಲ್ಲಿ 30-50 ಎಂ.ಎಂ.ನ ಹೊಳೆಯ ಕಲ್ಲು ಹಾಸಲಾಗುತ್ತದೆ ಅದರ ಮೇಲೆ ಕ್ರಮವಾಗಿ 25-35 ಎಂ.ಎಂ.ಕಲ್ಲು, 15-25 ಎಂ.ಎಂ.ಕಲ್ಲು, 6-12 ಎಂ.ಎಂ.ಕಲ್ಲು, 3-6 ಎಂ.ಎಂ ಕಲ್ಲು ಮತ್ತು 1-3 ಎಂ.ಎಂ ಮರಳು, 0.4 ಎಂ.ಎಂ.ನಿಂದ 0.8 ಎಂ.ಎಂ ಮರಳು ಹಾಸಲಾಗುತ್ತದೆ. ಅದರ ಮೇಲೆ ಇದ್ದಿಲು ಹಾಸಲಾಗುತ್ತದೆ. ನದಿಯಿಂದ ಎತ್ತಲಾಗುವ ನೀರು ಶುದ್ದೀಕರಣ ಘಟಕದಲ್ಲಿ ವಿವಿಧ ಹಂತದಲ್ಲಿ ಹಾದು ಬಳಿಕ ಈ ಫಿಲ್ಟರ್ ಬೆಡ್ ಮೂಲಕ ಶುದ್ದೀಕರಣ ಆಗಿ ಸರಬರಾಜು ಆಗುತ್ತದೆ.
1983ರಲ್ಲಿ ನಿರ್ಮಾಣ ಆದ ಶುದ್ಧೀಕರಣ ಘಟಕ ನಗರದ 5 ಸಾವಿರ ಜನರಿಗೆ ನೀರು ಸರಬರಾಜು ಮಾಡುವ ಸಾಮರ್ಥ್ಯ ಹೊಂದಿತ್ತು. ಆದರೆ ಕ್ರಮೇಣ ನಗರದ ಜನಸಂಖ್ಯೆ ಹೆಚ್ಚಳ ಆಗಿ 25 ಸಾವಿರಕ್ಕೆ ಏರಿದೆ. ಆದರೆ ಶುದ್ದೀಕರಣ ಘಟಕ ಮೇಲ್ದರ್ಜೆಗೆ ಏರಿಲ್ಲ. ಅದೇ ಶುದ್ದೀಕರಣ ಘಟಕದಿಂದಲೇ ನೀರು ಸರಬರಾಜಾಗುತ್ತದೆ. ಅಲ್ಲದೆ ಕಳೆದ ಅನೇಕ ವರ್ಷಗಳಿಂದ ಫಿಲ್ಟರ್ ಬೆಡ್ ಕೂಡ ನವೀಕರಣ ಆಗಿರಲಿಲ್ಲ. ಇದರಿಂದ ನಗರಕ್ಕೆ ಕೆಸರು ಮಿಶ್ರಿತ ನೀರು ಸರಬರಾಜಾಗುತಿತ್ತು. ಇದೀಗ ಫಿಲ್ಟರ್ ಬೆಡ್ ನವೀಕರಣ ಆದ ಕಾರಣ ಸ್ವಲ್ಪಮಟ್ಟಿಗೆ ಕೆಸರು ಮಿಶ್ರಿತ ಬರುವುದು ಕಡಿಮೆ ಆಗಬಹುದು ಎಂದು ಹೇಳಲಾಗಿದೆ.
ಒಟ್ಟು 145 ಹೆಚ್ಪಿ ಪಂಪ್ನಲ್ಲಿ ಪಂಪಿಂಗ್:
1983 ರಲ್ಲಿ ನೀರು ಸರಬರಾಜು ಘಟಕ ಆದ ಸಂದರ್ಭದಲ್ಲಿ 30 ಹೆಚ್ಪಿ ಪಂಪ್ನಲ್ಲಿ ನೀರು ಎತ್ತಲಾಗುತ್ತಿತ್ತು. ಈಗ 50 ಎಚ್ಪಿಯ ಎರಡು ಪಂಪ್ ಹಾಗೂ 45 ಎಚ್ಪಿಯ ಒಂದು ಪಂಪ್ನಿಂದ ನೀರು ಎತ್ತಲಾಗುತಿದೆ.
ಜಾಕ್ವೆಲ್ ಕಾಮಗಾರಿ ಪ್ರಗತಿಯಲ್ಲಿ:
ಸುಳ್ಯನಗರಕ್ಕೆ ನೀರೆತ್ತಲು ಕಲ್ಲುಮುಟ್ಲುವಿನಲ್ಲಿ ಪಯಸ್ವಿನಿ ದಡದಲ್ಲಿ ನಿರ್ಮಾಣವಾಗುತ್ತಿರುವ ಜಾಕ್ವೆಲ್ ಕಾಮಗಾರಿ ಪ್ರಗತಿಯಲ್ಲಿದೆ.ನಗರೋತ್ಥಾನ ಮತ್ತಿತರ ಅನುದಾನ ಸೇರಿಸಿ 2.5 ಕೋಟಿ ಅನುದಾನದಲ್ಲಿ ಜಾಕ್ವೆಲ್ ಕಾಮಗಾರಿ ನಡೆಯುತಿದೆ.
ಜಾಕ್ವೆಲ್ ಕಾಮಗಾರಿ
ಸಮಗ್ರ ಕುಡಿಯುವ ನೀರಿನ ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣ:
ಅಮೃತ್ 2 ಯೋಜನೆಯಲ್ಲಿ ಕೇಂದ್ರ, ರಾಜ್ಯ ಸರಕಾರ ಹಾಗೂ ನಗರ ಪಂಚಾಯತ್ ಸಹಭಾಗಿತ್ವದಲ್ಲಿ 60 ಕೋಟಿ ರೂ ವೆಚ್ಚದಲ್ಲಿ ಸುಳ್ಯದಲ್ಲಿ ಅನುಷ್ಠಾನ ಆಗುತ್ತಿರುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ತಿಯಾಗಿದೆ. ಕ್ಷೇತ್ರ ಸರ್ವೆ ಮಾಡಲಾಗಿದೆ. ಓವರ್ ಹೆಡ್ ಟ್ಯಾಂಕ್, ಶುದ್ದೀಕರಣ ಘಟಕ ಮಾಡುವ ಕುರುಂಜಿಗುಡ್ಡೆಯಲ್ಲಿ ಸಮತಟ್ಟು ಮಾಡಿ ಮಣ್ಣು ಪರೀಕ್ಷೆ, ನಕ್ಷೆ ತಯಾರಿಕೆ ಮತ್ತಿತರ ಪ್ರಕ್ರಿಯೆಗಳು ನಡೆಯುತಿದೆ. ಮುಂದಿನ ದಿನಗಳಲ್ಲಿ ಗುದ್ದಲಿಪೂಜೆ ನಡೆದು ಕಾಮಗಾರಿ ಆರಂಭ ಆಗಲಿದೆ ಎಂದು ನಗರ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಿದೆ
ಕಲ್ಲುಮುಟ್ಲುವಿನ ನೀರು ಶುದ್ದೀಕರಣ ಘಟಕ
‘ಕಳೆದ 8-10 ವರ್ಷಗಳಿಂದ ಫಿಲ್ಟರ್ ಬೆಡ್ ನವೀಕರಣ ಆಗಿರಲಿಲ್ಲ. ನಮ್ಮ ಅವಧಿಯಲ್ಲಿ 15 ಲಕ್ಷ ಅನುದಾನ ಇರಿಸಿ ಇದೀಗ ನವೀಕರಣ ಕಾಮಗಾರಿ ನಡೆಯುತಿದೆ. ಇದರಿಂದ ನಗರಕ್ಕೆ ಸರಬರಾಜಾಗುವ ನೀರು ಶುದ್ದೀಕರಣ ಆಗಿ ಕೆಸರು ಮಿಶ್ರಿತ ನೀರು ಹರಿಯುವುದು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ಸಮಗ್ರ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ತಿಯಾಗಿದೆ.
-ವಿನಯಕುಮಾರ್ ಕಂದಡ್ಕ.
ಸದಸ್ಯರು. ಮಾಜಿ ಅಧ್ಯಕ್ಷರು ನ.ಪಂ.ಸುಳ್ಯ.