ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಆವೃತ್ತಿಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ವಿವಿಧ ತಂಡಗಳ ಸ್ಟಾರ್ ವೇಗಿಗಳು ಗಾಯದ ಸಮಸ್ಯೆಯಿಂದ ಬಳಿದ್ದು ತಂಡಗಳಿಗೆ ತಲೆ ನೋವಾಗಿದೆ. ಕೋಲ್ಕತ್ತ ನೈಟ್ ರೈಡರ್ಸ್ ತಂಡದ ತಾರಾ ವೇಗಿ ಹರ್ಷಿತ್ ರಾಣಾ ಅವರು ಟೂರ್ನಿಯ ಕೆಲವು ಪಂದ್ಯಗಳಿಗೆ
ಲಭ್ಯವಿರುವುದಿಲ್ಲ ಎಂದು ವರದಿಯಾಗಿದೆ. ಇದೀಗ ಆರ್ಸಿಬಿ ಹಾಗೂ ಎಸ್ಆರ್ಎಚ್ ತಂಡಗಳಿಗೂ ಆಟಗಾರರ ಗಾಯದ ಚಿಂತೆ ಎದುರಾಗಿದೆ.ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಮತ್ತು ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಜೋಶ್ ಹ್ಯಾಜಲ್ವುಡ್ ಅವರು ಈ ಬಾರಿಯ ಐಪಿಎಲ್ನ ಆರಂಭಿಕ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಎಸ್ಆರ್ಎಚ್ ತಂಡದ ನಾಯಕ ಕಮ್ಮಿನ್ಸ್ ಅವರು 2025ರ ಡಿಸೆಂಬರ್ನಿಂದ ಗಾಯದ ಕಾರಣದಿಂದಾಗಿ
ಆಸ್ಟ್ರೇಲಿಯಾ ತಂಡದಿಂದ ದೂರ ಉಳಿದಿದ್ದಾರೆ. ಮಾತ್ರವಲ್ಲ, ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಅನ್ನು ಅವರು ತಪ್ಪಿಸಿಕೊಂಡಿದ್ದರು.ಹ್ಯಾಜಲ್ವುಡ್ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ತಂಡದಿಂದ ದೂರ ಉಳಿದಿದ್ದಾರೆ. 2025ರ ನವೆಂಬರ್ನಲ್ಲಿ ಅವರು ಕೊನೆಯದಾಗಿ ನ್ಯೂ ಸೌತ್ ವೇಲ್ಸ್ ಪರ ಆಡಿದ್ದರು.
ಅವರು ಫಿಟ್ನೆಸ್ ಮರಳಿ ಪಡೆಯಲು ಯಶಸ್ವಿಯಾದರೆ, ಟೂರ್ನಿಯ ನಡುವೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಎಸ್ಆರ್ಎಚ್ ನಾಯಕರಾಗಿರುವ ಕಮ್ಮಿನ್ಸ್ ಬದಲು ಇಶಾನ್ ಕಿಶನ್ ಅವರನ್ನು ಹಂಗಾಮಿ ನಾಯಕನಾಗಿ ಘೋಷಿಸಿದೆ.














