ಭೋಪಾಲ: ಏಷ್ಯಾದ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ‘ವತ್ಸಲಾ’ ಮಂಗಳವಾರ ಮಧ್ಯಪ್ರದೇಶದ ಪನ್ನಾದಲ್ಲಿ ಮೃತಪಟ್ಟಿದೆ. ‘ವತ್ಸಲಾ’ಳ ವಯಸ್ಸು ನೂರು ವರ್ಷಗಳನ್ನು ದಾಟಿತ್ತು ಎನ್ನಲಾಗಿದೆ. ವತ್ಸಲಾಳನ್ನು ಕೇರಳದ ನಿಲಂಬೂರ್ ಕಾಡಿನಿಂದ ತಂದು ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು.ವತ್ಸಲಾ ಮೀಸಲು ಅರಣ್ಯ ಪ್ರದೇಶದ
ಅತ್ಯಂತ ಹಿರಿಯ ಆನೆಯಾಗಿತ್ತು ಮತ್ತು ಪ್ರವಾಸಿಗಳ ಪ್ರಮುಖ ಆಕರ್ಷಣೆಯಾಗಿತ್ತು.
ತನ್ನ ಮುಂಗಾಲುಗಳಿಗೆ ಮೊಳೆಗಳು ಚುಚ್ಚಿ ಗಾಯಗೊಂಡಿದ್ದ ವತ್ಸಲಾ ಮೀಸಲು ಕ್ಷೇತ್ರದ ಹಿನೌಟಾ ಪ್ರದೇಶದ ಖೈರಾಯನ್ ಕಾಲುವೆಯ ಬಳಿ ಕಾಣಿಸಿಕೊಂಡಿತು. ಅರಣ್ಯ ಇಲಾಖೆಯು ಚಿಕಿತ್ಸೆ ನೀಡಿದರೂ ಮಧ್ಯಾಹ್ನ ಅದು ಕೊನೆಯುಸಿರೆಳೆಯಿತು.
ವತ್ಸಲಾಳನ್ನು ಹಿನೌಟಾ ಆನೆ ಶಿಬಿರದಲ್ಲಿ ಇರಿಸಲಾಗಿತ್ತು. ಪ್ರತಿದಿನ ಅದನ್ನು ಸ್ನಾನಕ್ಕಾಗಿ ಖೈರಾಯನ್ ಕಾಲುವೆಯ ಬಳಿ ಕರೆದೊಯ್ಯಲಾಗುತ್ತಿತ್ತು ಮತ್ತು ಆಹಾರವನ್ನಾಗಿ ಗಂಜಿಯನ್ನು ನೀಡಲಾಗುತ್ತಿತ್ತು. ವಯಸ್ಸಿನ ಕಾರಣದಿಂದ ಅದು ದೃಷ್ಟಿಯನ್ನು ಕಳೆದುಕೊಂಡಿತ್ತು ಮತ್ತು ಹೆಚ್ಚು ದೂರ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ಆದರ ಆರೋಗ್ಯದ ಮೇಲೆ ನಿಗಾಯಿರಿಸಿದ್ದರು ಎಂದು ವರದಿಯಾಗಿದೆ.





