ಸುಳ್ಯ: ಗಡಿ ಪ್ರದೇಶವಾದ ಮಂಡೆಕೋಲಿನಲ್ಲಿ ಕಾಡಾನೆ ಹಾವಳಿ ಮತ್ತೆ ತೀವ್ರಗೊಂಡಿದ್ದು ಆನೆಗಳ ಹಿಂಡು ವ್ಯಾಪಕವಾಗಿ ಕೃಷಿ ಹಾನಿ ಮಾಡಿದೆ. ಅಪಾರ ಪ್ರಮಾಣದ ಬೆಳೆ ನಾಶ ಉಂಟಾಗಿದೆ. ಕಳೆದ ರಾತ್ರಿ ಮಂಡೆಕೋಲಿನ ತೋಟಪಾಡಿ ಮತ್ತಿತರ ಕಡೆಗಳಲ್ಲಿ ಆನೆಗಳು ದಾಳಿ ಮಾಡಿದ್ದು ಬಾಳೆ, ತೆಂಗು, ಕಂಗು ಮತ್ತಿತರ ಕೃಷಿ ನಾಶ ಪಡಿಸಿವೆ. ಸ್ಥಳೀಯರು ಪಟಾಕಿ ಸಿಡಿಸಿ, ಬೆಂಕಿಯ ದೊಂದಿ ಹಿಡಿದು
ಆನೆಗಳನ್ನು ಓಡಿಸಲು ಪ್ರಯತ್ನ ನಡೆಸಿದರು. ಆನೆಗಳನ್ನು ಒಮ್ಮೆ ಕೃಷಿ ಭೂಮಿಯಿಂದ ಅಟ್ಟಿದರೂ ದೂರ ಸರಿಯದೇ ಜನವಸತಿ ಪ್ರದೇಶದ ಬಳಿಯಿರುವ ಕಾಡಲ್ಲಿ ಬೀಡು ಬಿಡುವ ಕಾಡಾನೆಗಳು ಮತ್ತೆ ಕೃಷಿ ಪ್ರದೇಶಕ್ಕೆ ಬಂದು ಕೃಷಿ ಹಾನಿ ಮಾಡುತ್ತವೆ ಎನ್ನುತ್ತಾರೆ ಸ್ಥಳೀಯರು. ಮಂಡೆಕೋಲು ಗ್ರಾಮದಲ್ಲಿ
ಕಳೆದ ದಿನ ಕನ್ಯಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳು ಕೃಷಿ ಹಾನಿ ಮಾಡಿತ್ತು. ಕಳೆದ ಹಲವು ದಿನಗಳಿಂದ ಆನೆಗಳು ಗ್ರಾಮದ ವಿವಿಧೆಡೆ ದಾಳಿ ನಡೆಸಿ ಕೃಷಿ ಹಾನಿ ಮಾಡುತ್ತಿವೆ. ಕಳೆದ ಹಲವು ವರ್ಷಗಳಿಂದ ಕಾಡಾನೆಗಳ ದಾಳಿಯಿಂದ ಮಂಡೆಕೋಲು ಗ್ರಾಮ ನಲುಗಿ ಹೋಗಿದೆ. ಪ್ರತಿ ದಿನವೂ ಕಾಡಾನೆ ಭೀತಿಯಲ್ಲಿ ದಿನ ಕಳೆಯಬೇಕಾದ ಸ್ಥಿತಿ ಇಲ್ಲಿನ ಜನರದ್ದು.