ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಅಡಿಕೆ ಗಿಡಗಳ ತಳಿಗಳಲ್ಲಿ ಹತ್ತಾರು ತಳಿಗಳಿವೆ. ಅದರಲ್ಲಿ ಅತ್ಯಂತ ವಿಶಿಷ್ಟ ಮತ್ತು ಮುದ್ದಾದ ಅಡಿಕೆ ತಳಿ ಎಂದರೆ ಕುಬ್ಜ (ಡ್ವಾರ್ಫ್) ತಳಿಯ ಅಡಿಕೆ ಗಿಡಗಳು. ಈ ಕುಳ್ಳ ಅಡಿಕೆ ಗಿಡಗಳನ್ನು ಮನೆಗಳ, ಕಚೇರಿಗಳ ಮುಂಭಾಗದಲ್ಲಿ ಎರಡು ಅಥವಾ ನಾಲ್ಕು ಗಿಡಗಳು ಅಲಂಕಾರಿಕವಾಗಿ ಬೆಳೆಸುವುದು ಸಾಮಾನ್ಯ ಕಂಡು ಬರುತ್ತದೆ.ಆದರೆ ಸುಮಾರು 50ಕ್ಕೂ ಅಧಿಕ ಕುಬ್ಜ ಅಡಿಕೆ ತಳಿಗಳನ್ನು ಬೆಳೆಸಿ ಸುಂದರ ತೋಟ
ರಚಿಸಿದ್ದಾರೆ ಸುಳ್ಯ ಐವರ್ನಾಡಿನ ಕೃಷಿಕ ನವೀನ್ ಚಾತುಬಾಯಿ. ವೈವಿಧ್ಯಮಯ ಕೃಷಿ, ಮಿಶ್ರ ಬೆಳೆಗಳ ಆಗರವಾಗಿರುವ ನವೀನ್ ಅವರ ತೋಟದಲ್ಲಿ ಕುಬ್ಜ ತಳಿಗಳ ತೋಟ ವಿಶೇಷ ಗಮನ ಸೆಳೆಯುತ್ತಿದೆ.ವಿಟ್ಲ ಸಿಪಿಸಿಆರ್ಐ ಅಭಿವೃದ್ಧಿ ಪಡಿಸಿದ ಈ ಕುಬ್ಜ ಅಡಿಕೆ ತಳಿಗೆ ಭಾರೀ ಬೇಡಿಕೆ ಇದೆ. ಆದುದರಿಂದಲೇ ಗಿಡ ಸಿಗುವುದೂ ಅಪರೂಪ. ನವೀನ್ ಆರಂಭದಲ್ಲಿ 10 ಗಿಡಗಳನ್ನು ತಂದು ನೆಟ್ಟರು. ಅದರ ಅಡಿಕೆಯನ್ನು ಗಿಡ
ಮಾಡಿ ಸುಮಾರು 50ಕ್ಕಿಂತಲೂ ಅಧಿಕ ಗಿಡಗಳನ್ನು ತನ್ನ ಮನೆಯ ಸುತ್ತ ನೆಟ್ಟು ಸುಂದರ ತೋಟ ಮಾಡಿದ್ದಾರೆ. ಸುಂದರ ಹೂತೋಟದಂತೆ ಹಸಿರು ನಳ ನಳಿಸುವ ಈ ತೋಟದಲ್ಲಿ ಆರಂಭದಲ್ಲಿ ನೆಟ್ಟ ಗಿಡಗಳು ಫಸಲು ನೀಡಲು ಆರಂಭಿಸಿದೆ. ಮುದ್ದಾದ ಈ ಗಿಡಗಳನ್ನೂ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾಗಿರುವ ಫಸಲು ನೀಡುವ ಈ ಅಡಿಕೆ ಮರಗಳನ್ನು ನೋಡುವುದೇ ಒಂದು ಚಂದ.. ಮನಸ್ಸಿಗೆ ಆನಂದ..!
ದೊಡ್ಡ ಅಡಿಕೆ ಮರಗಳಿಗೆ ಹೋಲಿಸಿದರರೆ ಈ ಮರಗಳಲ್ಲಿ ಫಸಲು ಕಡಿಮೆಯೇ, ಆದರೆ ಈ ಕುಬ್ಜ ತಳಿಯ ಅಡಿಕೆಯಿಂದ ಗಿಡ ತಯಾರಿಸಿ ನೀಡಿದರೆ ಉತ್ತಮ ಆದಾಯ ಗಳಿಸಬಹುದು ಎಂಬುದು ನವೀನ್ ಅಭಿಪ್ರಾಯ. ನರ್ಸರಿಗಳಲ್ಲಿ ಡ್ವಾರ್ಪ್ ತಳಿಯ ಘಟಕಗಳಿಗೆ ಉತ್ತಮ
ಬೇಡಿಕೆ ಮತ್ತು ದರ ಇದೆ. ಸಾಮಾನ್ಯವಾಗಿ ಒಂದು ವರ್ಷದ ಗಿಡಕ್ಕೆ ರೂ.150, ಎರಡನೇ ವರ್ಷದ ಗಿಡಕ್ಕೆ 300 ಹಾಗೂ ಮೂರು ವರ್ಷದ ಕುಬ್ಜ ತಳಿಯ ಗಿಡಕ್ಕೆ ರೂ ಒಂದು ಸಾವಿರ ಇದೆ ಎನ್ನುತ್ತಾರೆ. ನವೀನ್. ಇವರು ಸ್ವಲ್ಪ ಗಿಡಗಳನ್ನು ಮಾಡಿ ಅಗತ್ಯ ಇರುವವರಿಗೆ ನೀಡುತ್ತಾರೆ. ಇತರ ತಳಿಯ ಒಂದು ಅಡಿಕೆ ಮರದಲ್ಲಿ ನಾಲ್ಕು ಕೆಜಿವರೆಗೆ ಅಡಿಕೆ ಫಸಲು ನೀಡಿದರೆ ಈ ಗಿಡದಲ್ಲಿ ಎರಡರಿಂದ ಎರಡೂವರೆ ಕೆಜಿ ಅಡಿಕೆ ಅಡಿಕೆ ಮಾತ್ರ ದೊರೆಯುತ್ತದೆ.ಮೂರು ವರ್ಷದೊಳಗೆ ಫಸಲು ನೀಡುವ ಈ ತಳಿಗಳ ಅಡಿಕೆ ಇತರ ತಳಿಗಳ ಅಡಿಕೆಯ ರೀತಿಯಲ್ಲಿಯೇ ಇದೆ. ಗಿಡ ತುಂಬಾ ಅಡಿಕೆ ಗೊಂಚಲು ಹೊತ್ತ ಈ ಗಿಡಗಳು ತೋಟದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.
ಸುಮಾರು 15 ವರ್ಷ ಹಿಂದೆ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ಮೂಲಕ ಅಡಕೆ ಪ್ರಪಂಚಕ್ಕೆ ಪರಿಚಯಗೊಂಡ ಕುಬ್ಜ ತಳಿ ಅಡಕೆ ಗಿಡಕ್ಕೆ ಭಾರೀ ಡಿಮ್ಯಾಂಡ್, ಹಲವು ರಾಜ್ಯಗಳಿಂದಲೂ ಬೇಡಿಕೆ ಬರುತ್ತದೆ. ‘ವಿಟಿಎಲ್ಎಎಚ್-1’ ಮತ್ತು ‘ವಿಟಿಎಲ್ಎಎಚ್-2’ ಕುಬ್ಜ ತಳಿ ಭೂಮಿ ಮಟ್ಟದಿಂದ ಒಂದಡಿ ಎತ್ತರಕ್ಕೆ ಬೆಳೆದಲ್ಲಿಂದಲೇ ಫಸಲು ಕೊಡುತ್ತದೆ. ಈ ಹೈಬ್ರಿಡ್ ತಳಿಯ ಗಿಡಗಳು 15 ವರ್ಷಗಳ ತಮ್ಮ ಬದುಕಿನಲ್ಲಿ ಈಗಲೂ ನಿಂತುಕೊಂಡೇ ಗೊನೆ
ಕೊಯ್ಯಬಹುದಾದಷ್ಟು ಗಿಡ್ಡ ಮರಗಳಾಗಿವೆ. ನಿರ್ವಹಣೆ, ಔಷಧ ಸಿಂಪರಣೆ, ಕೊಯ್ಲು ಸುಲಭ. ಆದರೆ ಎತ್ತರ ತಳಿಯ ಮರಗಳಿಗಿಂತ ಕಡಿಮೆ ಇಳುವರಿ ಕೊಡುತ್ತದೆ ಎಂಬುದು ಇದರ ಮಿತಿ.
ಅಡಿಕೆ, ತೆಂಗು, ಕೊಕ್ಕೊ, ಬಾಳೆ, ಕರಿಮೆಣಸು, ಪಪ್ಪಾಯ, ಮುತ್ತು ಕೃಷಿ, ಜೇನು, ಮೀನು ಸಾಕಣೆ, ಹಣ್ಣುಗಳ ಗಿಡ ಹೀಗೆ ಹತ್ತಾರು ಕೃಷಿಯ ಮೂಲಕ ಕೃಷಿಯ ಸ್ವರ್ಗದಂತಿರುವ ನವೀನ್ ಅವರ ತೋಟಕ್ಕೆ ಮುಕುಟ ಮಣಿಯಾಗಿ ಸೌಂದರ್ಯ ಹೆಚ್ಚಿಸಿದೆ ಈ ಡ್ವಾರ್ಪ್ ತೋಟ..!