ಸುಳ್ಯ: ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ ಕಡ್ಡಾಯ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಹೇಳಿದರು. ಸುಳ್ಯದ ಕನ್ನಡ ಭವನಕ್ಕೆ ಇಂದು ಭೇಟಿ ನೀಡಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡದ ಸ್ಥಿತಿ ಶೋಚನೀಯವಾಗಿದೆ.ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಬೆಳವಣಿಗೆ ಶೇ 3.7 ರಲ್ಲಿದೆ. ಕನ್ನಡಿಗರೇ ಕನ್ನಡದ ಬಗ್ಗೆ
ತಾತ್ಸಾರ ಮನೋಭಾವನೆ ತಾಳುತ್ತಿದ್ದಾರೆ ಎಂದ ಅವರು ಸರಕಾರ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ಆರಂಭಿಸಿದಾಗ ಯಾವುದೇ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಲಿಲ್ಲ. 5ನೇ ತರಗತಿವರೆಗೆ ಕನ್ನಡ ಕಡ್ಡಾಯ ಮಾಡಬೇಕು ಎಂದು ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಬಿಳಿಮಲೆಯವರನ್ನು ಗೌರವಿಸಿದರು. ಕನ್ನಡ ಭವನದಲ್ಲಿ ಮೇಲ್ಛಾವಣಿಯಲ್ಲಿ ಉದ್ದೇಶಿತ ತಾಲೂಕಿನ ಕನ್ನಡ ಸಾಹಿತಿಗಳ ಪುಸ್ತಕಗಳ ಲೈಬ್ರರಿ ಒಳಗೊಂಡ ಕಟ್ಟಡಕ್ಕೆ ಇಲಾಖೆಯ ವತಿಯಿಂದ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ವೇದಿಕೆಯಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಹಿರಿಯರಾದ ಡಾ.ಚಂದ್ರಶೇಖರ ದಾಮ್ಲೆ, ಡಾ.ಪ್ರಭಾಕರ ಶಿಶಿಲ, ಕುತ್ಯಾಳ ನಾಗಪ್ಪ ಗೌಡ, ಕನ್ನಡಾಭಿಮಾನಿಗಳು, ಸಾಹಿತಿಗಳು, ಗಣ್ಯರು ಉಪಸ್ಥಿತರಿದ್ದರು.