ಮಂಗಳೂರು: ಸಾಹಿತ್ಯ ಶೋಷಣೆ, ಅಸಮಾನತೆ ಮತ್ತು ಅಜ್ಞಾನದ ವಿರುದ್ಧ ಸದಾ ಧ್ವನಿ ಎತ್ತಿ ಹೋರಾಟ ನಡೆಸಿದೆ.ಸರ್ವ ಸಮಾನತೆಯ ಶೋಷಣಾರಹಿತ ಸಮಾಜ ನಿರ್ಮಾಣ ಸಾಹಿತ್ಯದ ಮುಖ್ಯ ಉದ್ದೇಶ ಎಂದು ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಹೇಳಿದ್ದಾರೆ.ಅವರು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾದ 2 ದಿನಗಳ ದ.ಕ. ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.ಮಾನವನ ಇತಿಹಾಸದುದ್ದಕ್ಕೂ ಎದ್ದು
ಕಾಣುವುದು ಸಮಾಜದ ಶೋಷಣಾ ಪ್ರವೃತ್ತಿ ಮತ್ತು ಅದರಿಂದುಂಟಾದ ಅಸಮಾನತೆ. ಇದಕ್ಕೆ ಹಲವಾರು ಸ್ವರೂಪಗಳಿವೆ. ಲಿಂಗ ತಾರತಮ್ಯ. ಭಾಷಾ ತಾರತಮ್ಮ, ಸಾಮಾಜಿಕ ತಾರತಮ್ಯ, ಧಾರ್ಮಿಕ ತಾರತಮ್ಯ, ಆರ್ಥಿಕ ಆಸಮಾನತೆ, ಪ್ರಾದೇಶಿಕ ಅಸಮತೋಲನ, ಸಂಬಂಧಗಳ ತಾರತಮ್ಯ ಇತ್ಯಾದಿಯಾಗಿ ಶೋಷಣೆಗೆ ಹಲವು ಮುಖಗಳಿವೆ. ಸಮಾಜದ ಶೋಷಣಾ ಪ್ರವೃತ್ತಿಯನ್ನು ಗುರುತಿಸಿ. ಅದರ ನಿವಾರಣೆಗೆ ಯತ್ನಿಸುವುದು ಸಾಹಿತ್ಯ ನಿರ್ಮಾಣದ ಉದ್ದೇಶವಾಗಿರುತ್ತದೆಂದು ಕನ್ನಡ ಸಾಹಿತ್ಯ ಚರಿತ್ರೆಯ ಅವಲೋಕನದಿಂದ ತಿಳಿದು ಬರುತ್ತದೆ ಎಂದವರು ಹೇಳಿದರು. ಹುಟ್ಟಿದ್ದಾಗಲೀ, ಕಟ್ಟಿದ್ದಾಗಲೀ ಸಾಹಿತ್ಯಕ್ಕೊಂದು ನಿರ್ದಿಷ್ಟ ಉದ್ದೇಶ

ಇದ್ದೇ ಇರುತ್ತದೆ.ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಹಸ್ರಮಾನಗಳ ಇತಿಹಾಸ ಇದೆ. ಸಮಾಜವಾದವೆಂದರೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇದನ್ನು ಒಪ್ಪದವರಿಂದ ಸಂವಿಧಾನದ ಬದಲಾವಣೆಯ ಕೂಗು ಕೇಳಿಬರುತ್ತಿದೆ ಇದರಿಂದ ದೇಶದ ಬಹುತ್ವಕ್ಕೆ ಅಪಾಯವಿದೆ ಎಂದವರು ವಿಷಾದ ವ್ಯಕ್ತಪಡಿಸಿದರು. ಯುರೋಪ್ನಲ್ಲಿ ಲಿಂಕ್ ಭಾಷೆಯಾಗಿ ಇಂಗ್ಲಿಷ್ ಬಳಸುತ್ತಾರೆ. ನಮ್ಮಲ್ಲೂ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು, ಇಂಗ್ಲಿಷ್ ಲಿಂಕ್ ಭಾಷೆ ಆದರೆ ಸಾಕು. ಇದರ ಜೊತೆಯಲ್ಲಿ ಶಾಲೆಗಳ ಶಿಥಿಲಾವಸ್ಥೆಗೂ ಪರಿಹಾರ ಕಾಣಬೇಕಾಗಿದೆ. ಶಿಕ್ಷಕರ ನೇಮಕಾತಿ ಆಗಬೇಕಾಗಿದೆ. ಇಲ್ಲವಾದರೆ ಕನ್ನಡ ಶಾಲೆಗಳನ್ನು ಮುಚ್ಚಬೇಕಾದೀತು. ಶಿಕ್ಷಣಕ್ಕೆ ಶೇಕಡ 2ರಷ್ಟು ಹಣವನ್ನು ಬಜೆಟ್ನಲ್ಲಿ ತೆಗೆದಿರಿಸಲು ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎರಡು ದಿನಗಳ ಕಾಲ ನಡೆಯುವ ದ.ಕ. ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಚಾಲನೆ ನೀಡಲಾಯಿತು.
ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಮಂಗಳೂರು ಕುಲಪತಿ ಡಾ. ಪಿ.ಎಲ್.ಧರ್ಮ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ, ಕಸಾಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಉಳ್ಳಾಲ ತಾಪಂ ಇಒ ಗುರುದತ್ ಎಂ.ಎಸ್., ಕೊಣಾಜೆ ಗ್ರಾಪಂ ಅಧ್ಯಕ್ಷ ಗೀತಾ ದಾಮೋದರ ಕುಂದರ್, ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನ ಸಂಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಂಜಯ ಕುಂಬ್ಳೆ ಸ್ವಾಗತಿಸಿದರು. ಕಸಾಪ ಮೂಡುಬಿದಿರೆ ತಾಲೂಕು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮತ್ತು ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು.ಅಸೈಗೋಳಿ ಮೈದಾನದಿಂದ ಮಂಗಳಾ ವಿವಿ ಸಭಾಂಗಣದವರೆಗೆ ನಡೆದ ಕನ್ನಡ ಸಾಂಸ್ಕೃತಿಕ ದಿಬ್ಬಣವನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸಿದರು.