ಮಂಗಳೂರು:ಕಳೆದ ಎರಡು ವರ್ಷಗಳಿಂದ ದ.ಕ. ಜಿಲ್ಲೆಗೆ ಯಾವುದೇ ಹೊಸ ಯೋಜನೆ ನೀಡಲು ರಾಜ್ಯ ಸರಕಾರದಿಂದ ಸಾಧ್ಯವಾಗಿಲ್ಲ. ಮಾತ್ರವಲ್ಲದೆ ತುರ್ತು ಕಾಮಗಾರಿಗಳಿಗೂ ಅನುದಾನ ನೀಡದೆ ಕರಾವಳಿ ಜಿಲ್ಲೆಯ ಬಗ್ಗೆ ಸರಕಾರ ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದ ಪ್ರಸಂಗ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೋಮವಾರ ನಡೆಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ನಗರ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದ
ರಸ್ತೆಗಳಲ್ಲಿ ನಡೆದಾಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ಗುಂಡಿ ಮುಚ್ಚಲು ಅನುದಾನ ನೀಡಿಲ್ಲ. ಕರಾವಳಿ ಜಿಲ್ಲೆಗೆ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ಯೋಜನೆಯನ್ನು ಕಳೆದರಡು ವರ್ಷಗಳಿಂದ ನೀಡಲು ರಾಜ್ಯ ಸರಕಾರದಿಂದ ಸಾಧ್ಯ ಆಗಿಲ್ಲ. ಮಳೆ ಹಾನಿಯಿಂದಾಗಿ ತೊಂದರೆ ಆಗಿರುವ ಅಂಗನವಾಡಿಗೆ ಹೆಂಚು ಹಾಕಲು ಸಾಧ್ಯಾಗಿಲ್ಲ. ಕೆಲ ಶಾಲೆಗಳಲ್ಲಿ ಮರದಡಿ ಪಾಠ ಮಾಡುವ ಪರಿಸ್ಥಿತಿ ಇದೆ. ಕರಾವಳಿಯ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಧಾರ್ಮಿಕ ಸಂಸ್ಥೆಗಳಲ್ಲಿ ಸದಸ್ಯರ ನೇಮಕ ಮಾಡದೆ ದುಡ್ಡಿಲ್ಲದೆ ಯಾವುದೇ ಕಾಮಗಾರಿ ಮಾಡದಂತಾಗಿದೆ. ಆಡಳಿತಾಧಿಕಾರಿಗಳು ದುಡ್ಡಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ನ್ಯಾಯ ಕೊಡಬೇಕು ಎಂದು ದೂರಿದರು.ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಕಿರು ನೀರಾವರಿ ಯೋಜನೆಯಡಿ ನಿರ್ಮಿಸಲಾದ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಲು ಹಣ ಇಲ್ಲವಾಗಿದೆ. ಮಳೆ ಹಾನಿ ಆದ ಬಳಿಕ ರಸ್ತೆಗಳ ಕಾಮಗಾರಿಗೆ ಹಣ ಬಂದಿಲ್ಲ ಎಂದರು.
ಈ ಬಗ್ಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದಾಗ ಮತ್ತೆ ಶಾಸಕರು ಆರೋಪ ಮುಂದುವರಿಸಿದರು. ಈ ಸಂದರ್ಭ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾರವರು ಮಧ್ಯ ಪ್ರವೇಶಿಸಿ ಉತ್ತರ ನೀಡಲು ಅವಕಾಶ ನೀಡಿ ಎಂದಾಗ, ನಾವು ಪ್ರಶ್ನಿಸುತ್ತಿರುವುದು ಉಸ್ತುವಾರಿ ಸಚಿವರನ್ನು ಎಂದು ಆರೋಪ ಮುಂದುವರಿಸಿದರು. ಈ ಸಂದರ್ಭ ಕೆಲ ನಿಮಿಷಗಳ ಕಾಲ ಶಾಸಕರ ನಡುವೆ ವಾಗ್ವಾದ ನಡೆಯಿತು.
ಅನುದಾನ ಬದಲಾವಣೆ ಮಾಡುವಾಗ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸುವ ಕಾರ್ಯವೂ ಮಾಡಿಲ್ಲ. ವಿವಿಧ ನಿಗಮಗಳಿಗೆ ಅನುದಾನವೇ ನೀಡಿಲ್ಲ. ವಿವಿಧ ಸಮುದಾಯ ಭವನಗಳ ಕಾಮಗಾರಿ ತಡೆಹಿಡಿಯಲಾಗಿದೆ ಎಂದು ವೇದವ್ಯಾಸ ಕಾಮತ್ ಆರೋಪಿಸಿದರು.
‘ನೀವು ಉತ್ತರ ಕೊಡಲು ಬಿಡದೆ ಕೇವಲ ಆರೋಪ ಮಾಡುವ ಉದ್ದೇಶದಿಂದಲೇ ಬಂದಿರುವ ಹಾಗಿದೆ. ಚರ್ಚೆಯೂ ಇಲ್ಲದೆ, ಉತ್ತರ ನೀಡಲು ಅವಕಾಶ ನೀಡುತ್ತಿಲ್ಲವಲ್ಲ’ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಹೇಳಿದರು.
ಬಿಜೆಪಿ ಶಾಸಕರು ತಮ್ಮ ಆರೋಪ ಮುಂದುವರಿಸಿದರು.
ಈ ಸಂದರ್ಭ ಕೆಲ ನಿಮಿಷಗಳ ಕಾಲ ಸಭೆಯಲ್ಲಿ ಪರಸ್ಪರ ವಾಗ್ವಾದ ನಡೆದು ವೇದಿಕೆಯಲ್ಲಿದ್ದ ಸಂಸದ ಬ್ರಜೇಶ್ ಚೌಟ ಸೇರಿದಂತೆ ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಕೂಡ ಸಭೆಯಿಂದ ಹೊರನಡೆದರು. ಬಿಜೆಪಿ ಶಾಸಕರ ನಡೆಯಿಂದ ಅಸಮಾಧಾನಗೊಂಡ ಉಸ್ತುವಾರಿ ಸಚಿವರು ಸಭೆಯಲ್ಲಿ ಪ್ರತಿಕ್ರಿಯಿಸುತ್ತಾ, ಅಧಿಕಾರಿ ಗಳಿಂದ ಉತ್ತರ ಕೊಡಲು ಅವಕಾಶವೂ ನೀಡದೆ ಈ ರೀತಿ ಸಭಾತ್ಯಾಗ ಮಾಡುವುದು ಸರಿಯಲ್ಲ. ಮುಖಮಂತ್ರಿಯವರು ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ 2000 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅಪೆಂಡಿಕ್ಸ್ ನಲ್ಲಿ ಪಿಡಬ್ಲ್ಯುಡಿ ರಸ್ತೆಗಳಿಗೆ 4000 ಕೋಟಿರೂ. ಬಿಡುಗಡೆ ಮಾಡಲು ತೀರ್ಮಾನ ಆಗಿದೆ. ಒಟ್ಟು 6000 ಕೋಟಿ ರೂ. ಇಡೀ ರಾಜ್ಯಾದ್ಯಂತ ಬಿಡುಗಡೆಗೆ ತೀರ್ಮಾನ ಆಗಿದೆ. ಪ್ರತಿಯೊಬ್ಬ ಶಾಸಕರ ಕ್ಷೇತ್ರಕ್ಕೆ ಪಕ್ಷಾತೀತವಾಗಿ ನೀಡುವುದಾಗಿ ಹೇಳಿದ್ದಾರೆ ಎಂದರು.ಬಳಿಕ ಸಭೆ ಮುಂದುವರಿಯಿತು.
2024-25ನೆ ಸಾಲಿನಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಜುಲೈ 1ರಿಂದ ಹವಾಮಾನ ಆಧಾರಿತ ಬೆಳೆ ವಿಮೆ ಆರಂಭಿಸಲಾಗಿದ್ದು, ಉತ್ತಮ ಪ್ರಚಾರದ ಕಾರಣ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಒಟ್ಟು 94519 ಅಡಿಕೆ ಬೆಳೆಗಾರರು, 37734 ಕಾಳು ಮೆಣಸು ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯಡಿ ಈ ಮೂಲಕ ಜಿಲ್ಲೆಯ 256910 ಎಕರೆ ಅಡಿಕೆ ಹಾಗೂ 93382 ಎಕರೆ ಕಾಳು ಮೆಣಸು ಪ್ರದೇಶವಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.
ಅಡಿಕೆ ಸಮಸ್ಯೆ ಬಗ್ಗೆ ಸಭೆಯ ಗಮನ ಸೆಳೆದ ಭರತ್ ಮುಂಡೋಡಿ:
ಸಳ್ಯ ತಾಲೂಕಿನಲ್ಲಿ ಹಳದಿ ರೋಗದಿಂದ ಈಗಾಲೇ ಸಾಕಷ್ಟು ಅಡಿಕೆ ಬೆಳೆ ಹಾಳಾಗಿದೆ. ಕಳೆದ 20 ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದ್ದರೂ ಸೂಕ್ತ ಔಷಧಿ ಕಂಡುಹಿಡಿಯಲಾಗಿಲ್ಲ. ಇದೀಗ ಎಲೆಚುಕ್ಕಿ ರೋಗವೂ ಅಡಿಕೆ ಬೆಳೆಗಾರ ರನ್ನು ಬಹುವಾಗಿ ಬಾಧಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಸಭೆಯ ಗಮನ ಸೆಳೆದರು.
ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಮೆಲ್ವಿನ್ ಡಿಸೋಜಾ, ಹಮೀದ್ ಕಿನ್ಯ, ಸಂತೋಷ್ ಕುಮಾರ್, ಪ್ರವೀಣ್ ಕುಮಾರ್ ಜೈನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಪಾಲಿಕೆ ಆಯುಕ್ತ ಆನಂದ್ ಮೊದಲಾದವರು ಉಪಸ್ಥಿತರಿದ್ದರು.