ಲಖನೌ:ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಲಖನೌ ಒಡ್ಡಿದ 142 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ, ಸಮೀರ್ ರಿಜ್ವಿ ಆಕರ್ಷಕ ಅರ್ಧಶತಕದ ಬೆಂಬಲದೊಂದಿಗೆ 17.1 ಓವರ್ಗಳಲ್ಲಿ
ನಾಲ್ಕು ವಿಕೆಟ್ ನಷ್ಟಕ್ಕೆ ಜಯ ಗಳಿಸಿತು. ಡೆಲ್ಲಿ ಒಂದು ಹಂತದಲ್ಲಿ 26ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಈ ಸಂದರ್ಭದಲ್ಲಿ ಟ್ರಿಸ್ಟನ್ ಸ್ಟಬ್ಸ್ (ಅಜೇಯ 39) ಜೊತೆಗೆ ಮುರಿಯದ ಐದನೇ ವಿಕೆಟ್ಗೆ ಶತಕದ ಜೊತೆಯಾಟ (119) ಕಟ್ಟಿದ ಸಮೀರ್ ರಿಜ್ವಿ ತಂಡಕ್ಕೆ ಮಹತ್ವದ ಗೆಲುವು ಒದಗಿಸಿಕೊಡಲು ನೆರವಾದರು.ಸಮೀರ್ ರಿಜ್ವಿ 47 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳಿಂದ 70 ರನ್ ಗಳಿಸಿ ಔಟಾಗದೆ ಉಳಿದರು. ಲಖನೌ ಪರ
ಮಿಚೆಲ್ ಮಾರ್ಷ್ (35) ಹಾಗೂ ಅಬ್ದುಲ್ ಸಮದ್ (36) ಹೋರಾಟ ತೋರಿದರೂ, ಪಂತ್(7) ಏಡೆನ್ ಮಾರ್ಕರಂ (11), ಆಯುಷ್ ಬದೋನಿ (0) ಹಾಗೂ ನಿಕೋಲಸ್ ಪೂರನ್ (8) ಸೇರಿದಂತೆ ತಂಡದ ಪ್ರಮುಖ ಬ್ಯಾಟರ್ಗಳು ವೈಫಲ್ಯ ಕಂಡರು.
ಡೆಲ್ಲಿ ಪರ ಲುಂಗಿ ಗಿಡಿ ಹಾಗೂ ಟಿ. ನಟರಾಜನ್ ತಲಾ ಮೂರು, ಕುಲದೀಪ್ ಯಾದವ್ ಎರಡು ಮತ್ತು ಅಕ್ಷರ್ ಪಟೇಲ್ ಒಂದು ವಿಕೆಟ್ ಗಳಿಸಿದರು.









