ಸುಳ್ಯ: ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿ ಮುಖಂಡರ ನೇಮಕಾತಿ 15 ದಿನದಲ್ಲಿ ರದ್ದಾಗಬೇಕು, ಕಾಂಗ್ರೆಸ್ ಕಾರ್ಯಕರ್ತರ ಅಮಾನತು, ಉಚ್ಚಾಟನೆ ಪ್ರಸಂಗಕ್ಕೆ ಇತಿಶ್ರೀ ಹಾಡಿ ಎಲ್ಲರನ್ನೂ ಸಮಾನಾಗಿ ಪರಿಗಣಿಸಬೇಕು. ವಿವಿಧ ಸಮಿತಿಗಳಿಗೆ, ದೇವಸ್ಥಾನದ ಸಮಿತಿಗಳಿಗೆ ನೇಮಕಾತಿ ಸಂದರ್ಭ ಗ್ರಾಮದ ಪ್ರಮುಖರ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಲಯನ್ಸ್ ಸೇವಾ ಸದನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಒತ್ತಾಯಿಸಿದೆ. ಕಾಂಗ್ರೆಸ್ನಲ್ಲಿ ಉಂಟಾಗಿರುವ ಬೆಳವಣಿಗೆಯ ಹಿನ್ನಲೆಯಲ್ಲಿ
ಕಾಂಗ್ರೆಸ್ ಪಕ್ಷದ ಒಂದು ಬಣ ಕಾಂಗ್ರೆಸ್ ಉಳಿಸಿ ಅಭಿಯಾನ ಆರಂಭಿಸಿದ್ದು ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಕಾಂಗ್ರೆಸ್ ಸರಕಾರ ಇರುವಾಗ ಬಿಜೆಪಿಗರು ಅಕ್ರಮ ಸಕ್ರಮ ಸದಸ್ಯರಾಗುವುದಕ್ಕಿಂತ ದೊಡ್ಡ ಮುಜುಗರ ಪಕ್ಷಕ್ಕೆ ಬೇರೆ ಇಲ್ಲಾ. ಇದು ಹೀಗೆ ಮುಂದುವರಿದರೆ ಎಲ್ಲಾ ಸಮಿತಿಗಳಿಗೆ, ದೇವಸ್ಥಾನದ ಸಮಿತಿಗಳಿಗೆ ಬಿಜೆಪಿಗರೇ ನೇಮಕ ಆಗುವ ಸಾಧ್ಯತೆ ಇದೆ. ಆದುದರಿಂದ ಬಿಜೆಪಿಗರ ನೇಮಕಾತಿ ಕೂಡಲೇ ರದ್ದಾಗಬೇಕು ಮತ್ತು ವಿವಿಧ ಸಮಿತಿಗಳಿಗೆ ನೇಮಕಕ್ಕೆ ಶಿಫಾರಸ್ಸು ಮಾಡುವ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಭಾವುಕರಾದ ವೆಂಕಪ್ಪ ಗೌಡರು:
ಯಾವುದೇ ತಪ್ಪು ಮಾಡದಿದ್ದರೂ, ಪಕ್ಷಕ್ಕಾಗಿ ನಿರಂತರ ದುಡಿಯುತ್ತಿದ್ದರೂ ಪಕ್ಷದಿಂದ ನನಗೆ ಶೋಕಾಸ್ ನೋಟೀಸ್ ನೀಡಿರುವುದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಅಮಾನತು, ಉಚ್ಚಾಟನೆ ಮಾಡಿರುವುದು ತನಗೆ ಅತ್ಯಂತ ನೋವು ತಂದಿದೆ ಎಂದು ವೆಂಕಪ್ಪ ಗೌಡರು ಭಾವುಕರಾಗಿ ನುಡಿದರು. ಶೋಕಾಸ್ ನೋಟಿಸ್ ವಿಷಯ ಮಾತನಾಡಿದಾಗ ಗದ್ಗದಿತರಾದ ಅವರು ಶೋಕಾಸ್ ಅಮಾನತು ವಿಚಾರವನ್ನು ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಾಗ ಶೋಕಾಸ್, ಅಮಾನತು, ಉಚ್ಚಾಟನೆಯನ್ನು ಕೂಡಲೇ ಹಿಂಪಡೆಯಲು ಅವರು ಸೂಚಿಸಿದ್ದಾರೆ. ಆದುದರಿಂದ ಆ ವಿಚಾರ ಇಲ್ಲಿಗೆ ಕೊನೆಯಾಗಬೇಕು ಪಕ್ಷದಲ್ಲಿ ಎಲ್ಲರನ್ನೂ ಒಟ್ಟು ಸೇರಿಸಬೇಕು ಎಂದು ಅವರು ಆಗ್ರಹಿಸಿದರು.
ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ ಮತ್ತೊಮ್ಮೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಸುಳ್ಯದಲ್ಲಿ ಶಾಸಕರು ಗೆಲ್ಲುವಂತಾಗಬೇಕು. ಪಕ್ಷವನ್ನು ಗಟ್ಟಿ ಮಾಡುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಕೆ.ಗೋಕುಲ್ದಾಸ್ ಮಾತನಾಡಿ ‘ಬಿಜೆಪಿಗರು ಅಕ್ರಮ ಸಕ್ರಮ ಸಮಿತಿಗೆ ನೇಮಕ ಆಗಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದರು. ತಾ.ಪಂ.ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಬದಲಾಗಬೇಕು. ಹೊಸಬರಿಗೆ ಸಮಿತಿಯಲ್ಲಿ ಅವಕಾಶ ನೀಡಬೇಕು ಎಂದರು.
ಹಿರಿಯರಾದ ಬಾಲಕೃಷ್ಣ ಮರೀಲ್ ಮಾತನಾಡಿ ‘ಬಿಜೆಪಿ ಶಾಸಕರ ಕಚೇರಿಯಿಂದ ಕಳುಹಿಸಿದ ಪಟ್ಟಿ ಅಕ್ರಮ ಸಕ್ರಮ ಪಟ್ಟಿ ಅನುಮೋದನೆ ಆಗುವುದರ ಹಿಂದೆ ಕಾಂಗ್ರೆಸ್ ಪಕ್ಷದವರ ಕೈವಾಡ ಇರುವ ಸಾಧ್ಯತೆ ಇದೆ ಎಂದು ಹೇಳಿದರು.
ಬಾಲಕೃಷ್ಣ ಭಟ್ ಕೊಡೆಂಕೇರಿ ಮಾತನಾಡಿ ‘ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನೂ, ಕಾರ್ಯಕರ್ತರನ್ನು ಕಡೆಗಣಿಸಿದರೆ ಅಧಃಪತನ ಅದಂತೆ ಎಂದರು.
ದಿನೇಶ್ ಸರಸ್ವತಿ ಮಹಲ್ ಮಾತನಾಡಿ ‘ಕಾಂಗ್ರೆಸ್ ಪಕ್ಷದ ಗ್ರಾಮ ಸಮಿತಿಯನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.
ರವೀಂದ್ರ ರುದ್ರಪಾದ ಮಾತನಾಡಿ’ ಉಚ್ಛಾಟನೆಗೆ ಏನು ಮಾನದಂಡ ಎಂಬುದನ್ನು ಸ್ಪಷ್ಟಪಡಿಸಬೇಕು. ನಮ್ಮ ಉಚ್ಚಾಟನೆಯನ್ನು ಹಿಂಪಡೆದು ಅದನ್ನು ಮಾಧ್ಯಮಗಳ ಮೂಲಕ ಪ್ರಕಟಿಸಿದರೆ ಮಾತ್ರ ಇನ್ನು ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿಯುವುದು ಎಂದು ಹೇಳಿದರು.
ಪರಶುರಾಮ ಚಿಲ್ತಡ್ಕ ಮಾತನಾಡಿ’ ಬೂತ್ಗಳಲ್ಲಿ ಕುಳಿತುಕೊಳ್ಳಲು ಜನ ಇಲ್ಲದೇ ಇರುವ ಪರಿಸ್ಥಿತಿ ಇರುವಾಗ ಇರುವ ಕಾರ್ಯಕರ್ತರನ್ನು ಅಮಾನತು, ಉಚ್ಚಾಟನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸತ್ಯಕುಮಾರ್ ಆಡಿಂಜ, ಬಶೀರ್ ಅಹಮ್ಮದ್, ಚಂದ್ರಶೇಖರ ಕೋನಡ್ಕ, ಚೇತನ್ ಕಜೆಗದ್ದೆ ಮಾತನಾಡಿದರು. ಶಶಿಧರ ಎಂ.ಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಿಶಂಕರ ಕಲ್ಮಡ್ಕ ವಂದಿಸಿದರು.
ಪ್ರಮುಖರಾದ ಧೀರಾ ಕ್ರಾಸ್ತಾ, ಜಿ.ಕೆ.ಹಮೀದ್ ಗೂನಡ್ಕ, ರಹೀಂ ಬೀಜದಕಟ್ಟೆ, ಎಸ್.ಕೆ.ಹನೀಫ, ಶ್ರೀಲತಾ ಪ್ರಸನ್ನ, ತಾಜುದ್ದೀನ್ ಅರಂತೋಡು, ಶಿವಕುಮಾರ್ ಕಂದಡ್ಕ, ಪವನ್ ಮುಂಡ್ರಾಜೆ, ಉಮ್ಮರ್ ಕುರುಂಜಿಗುಡ್ಡೆ, ಸಲೀಂ ಪೆರುಂಗೋಡು, ಅಬ್ದುಲ್ ಬಶೀರ್ ಸಪ್ನಾ, ಲತೀಫ್,ರವೀಂದ್ರ ಪೂಜಾರಿ, ಮುಜೀಬ್ ಪೈಚಾರ್, ಆರ್.ಬಿ.ಪೈಚಾರ್, ಕೇಶವ ಕೊಳಲುಮೂಲೆ, ನಿತ್ಯಾನಂದ ಕುಕ್ಕುಂಬಳ ಮತ್ತಿತರರು ಭಾಗವಹಿಸಿದ್ದರು.