ಸುಳ್ಯ:ಬಡವರ ಬದುಕಿಗೆ ಆಸರೆಯಾಗಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿಯವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳ ವಿರೋಧಿಯಾದ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ಜನರು ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ಮಾಡಿ ಕಾಂಗ್ರೆಸ್ ಪ್ರಚಾರ ನಡೆಸುವ
ಸಂದರ್ಭ ಆಧಾರ್ ಕಾರ್ಡ್ ಕೇಳಿ, ಮತದಾರರಿಗೆ ಆಮಿಷ ತೋರಿಸುತ್ತಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಗೆ ವಿರೋಧಿಯಾದುದು. ಈ ಬಗ್ಗೆ ಚುನಾವಣಾ ಆಯುಕ್ತಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಬಹುಷಃ ಬಿಜೆಪಿ ನಾಯಕರಿಗೆ ಚುನಾವಣಾ ನೀತಿ ಸಂಹಿತೆಯ ಸಾಮಾನ್ಯ ಜ್ಞಾನ ಕೂಡ ಇಲ್ಲ ಎಂಬುವುದು ಇದರಿಂದ ಅರ್ಥವಾಗುತ್ತದೆ. ಸರಕಾರದ ಗ್ಯಾರೆಂಟಿ ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡು ಎಲ್ಲಾ ಮನೆಯ ಮಹಿಳೆಯರ ಮನೆಗೆ ಮತ್ತು ಮನಕ್ಕೆ ಮುಟ್ಟಿದೆ. ಇದರಿಂದ ವಿಚಲಿತರಾದ ಬಿಜೆಪಿಗರು ಈ ಹೇಳಿಕೆ ನೀಡುತ್ತಿದ್ದಾರೆ. ಇದು ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆ ಹಾಗೂ ಇದರ ಸಮರ್ಪಕ ಅನುಷ್ಠಾನಕ್ಕೆ ಸರಕಾರ ರೂಪಿಸಿದ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷನಾಗಿ ನನ್ನನ್ನು ನೇಮಿಸಿದ್ದಾರೆ. ಹಾಗಾಗಿ
ನಾನು ಜನರ ಬಳಿ ಮತ ಕೇಳಲು ಹೋದಾಗ ಗ್ಯಾರಂಟಿ ಯೋಜನೆಯ ಫಲ ನಿಮಗೆ ಸಿಕ್ಕಿದೆಯೇ ಎಂದು ಕೇಳಬೇಕಾದುದು ನನ್ನ ಕರ್ತವ್ಯ. ಆಗ ಸಹಜವಾಗಿಯೇ ಯೋಜನೆಯ ಫಲ ಸಿಕ್ಕದ ಮಹಿಳೆಯರು ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ನೀಡಿ ನಮಗೆ ಈ ಯೋಜನೆ ಸಿಕ್ಕುವಂತೆ ಮಾಡಬೇಕು ಎಂದು ಕೇಳುತ್ತಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆಯೇ. ಹಾಗಾದರೆ ಬಿಜೆಪಿಯವರು ದೂರು ನೀಡಬಹುದು. ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು. ಇದರಿಂದ ಬಿಜೆಪಿಯ ಮನಸ್ಥಿತಿ ಅರ್ಥವಾಗುತ್ತದೆ. ಜನ ಸಾಮಾನ್ಯರಿಗೆ, ಮಹಿಳೆಯರಿಗೆ ವರದಾನವಾಗಿರುವ ಯೋಜನೆಗಳನ್ನು ನಿಲ್ಲಿಸಬೇಕೆಂಬುದು ಬಿಜೆಪಿ ಬಯಕೆಯಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಕಾಂಗ್ರೆಸ್ ಸರಕಾರ ಇರುವ ತನಕ ಬಿಜೆಪಿಯ ಯಾವ
ಪ್ರಯತ್ನಗಳೂ ನಡೆಯುವುದಿಲ್ಲ. ಈ ಐದು ಗ್ಯಾರಂಟಿ ಯೋಜನೆಗಳೂ ಮುಂದುವರಿಯುವುದು ಶತಸಿದ್ದ. ಆದುದರಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರು ಬಿಜೆಪಿಯನ್ನು ತಿರಸ್ಕರಿಸಿ ಜನರ ಬದುಕಿಗೆ ಆಧಾರವಾದ ಕಾಂಗ್ರೆಸ್ ಪಕ್ಷವನ್ನು ಬೆಂಬಲ ನೀಡಿ ಎಂದು ಭರತ್ ಮುಂಡೋಡಿ ಹೇಳಿದರು. ನೇಹಾ ಹತ್ಯೆಯನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತಿದ್ದಾರೆ. ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ನಾವು ಆಗ್ರಹಿಸಿದ್ದೇವೆ ಎಂದು ಹೇಳಿದರು.
60 ಸಾವಿರ ಲೀಡ್ ಬಿಜೆಪಿಗರ ಕನಸು ಮಾತ್ತ:
ಈ ಬಾರಿ ಸುಳ್ಯದಲ್ಲಿ ಬಿಜೆಪಿಗೆ 60 ಸಾವಿರ ಲೀಡ್ ಸಿಗುತ್ತದೆ ಎನ್ನುವುದು ಬಿಜೆಪಿ ನಾಯಕರ ಕನಸು. ಈ ಬಾರಿ ಬಿಜೆಪಿಗರ ಲೆಕ್ಕ ಉಲ್ಟಾ ಆಗೋದು ಪಕ್ಕ ಎಂದು ಭರತ್ ಮುಂಡೋಡಿ ಹೇಳಿದರು.
ಶೇ.95 ಮನೆಗೆ ಗ್ಯಾರಂಟಿ ಯೋಜನೆ ತಲುಪಿದೆ :
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಮಾತನಾಡಿ, ಸರಕಾರದ ಗ್ಯಾರಂಟಿ ಯೋಜನೆಯು ಶೇ.95ರಷ್ಟು ಮನೆಗಳಿಗೆ ತಲುಪಿದೆ. ಕೆಲವೊಂದಿ ತಾಂತ್ರಿಕ ಸಮಸ್ಯೆಯಿಂದ ಶೇ.5 ಮಂದಿಗೆ ತಾಂತ್ರಿಕ ಸಮಸ್ಯೆಯಿಂದ ಲಭಿಸಿಲ್ಲ. ಅವರಿಗೂ ದೊರಕುವಂತೆ ಮಾಡುತ್ತೇವೆ. ಬಿಜೆಪಿಗರು ಬಿಟ್ಟಿ ಭಾಗ್ಯ ಎಂದು ಹೇಳುತ್ತಾರೆ. ಬಿಟ್ಟಿ ಭಾಗ್ಯ ಎಂದು ಹೇಳುವವರ ಮನೆಗೂ ಈ ಯೋಜನೆ ತಲುಪಿದೆ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ಸೌಲಭ್ಯ ಪಡೆದು ಆ ರೀತಿ ಹೇಳುವುದು ಸರಿಯಲ್ಲ. ಅದು ಸರಕಾರದ ಯೋಜನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ಮಾತನಾಡಿ, ಶೇ.5ರಷ್ಟು ಮನೆಗಳಿಗೆ ಮಾತ್ರ ತಾಂತ್ರಿಕ ಸಮಸ್ಯೆಯಿಂದ ಯೋಜನೆ ತಲುಪಿಲ್ಲ. ಈ ಕುರಿತು ಪೂರ್ಣ ಲೆಕ್ಕ ಪಡೆಯಲಾಗುತಿದ್ದು, ಮುಂದಿನ ದಿನದಲ್ಲಿ ಎಲ್ಲ ಅರ್ಹರಿಗೂ ಯೋಜನೆ ಸಿಗಲಿದೆ” ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ಚರಣ್ ಕಾಯರ, ತಮಿಳು ಮುಖಂಡ ಚಂದ್ರಲಿಂಗಂ ಐವರ್ನಾಡು ಉಪಸ್ಥಿದ್ದರು.