ಸುಳ್ಯ:ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಬಡವರಿಗೆ ವರದಾನವಾದ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಗೆ ತಿದ್ದುಪಡಿ ತಂದು ಹೆಸರು ಬದಲಾವಣೆ, ಯೋಜನೆಯಲ್ಲಿ ಹಲವು ಬದಲಾವಣೆ ಮಾಡಿ ಯೋಜನೆಯನ್ನು ನಿಲ್ಲಿಸುವ ಹುನ್ನಾರವನ್ನು ಕೇಂದ್ರ ಸರಕಾರ ಮಾಡುತಿದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಗೆ ತಿದ್ದುಪಡಿ ತಂದು ಹೆಸರು ಬದಲಾವಣೆ, ಯೋಜನೆ ಬದಲಾವಣೆ
ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ (ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ) ನರೇಗಾ ಬಚವೋ ಸಂಗ್ರಾಮ್ ಪಾದಯಾತ್ರೆಗೆ ಸುಳ್ಯದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಅನುದಾನವನ್ನು ಕಡಿತ ಮಾಡಿ ರಾಜ್ಯ ಸರಕಾರದ ಮೇಲೆ ಹೊರೆ ಹಾಕಿ ಯೋಜನೆಯನ್ನು ಕ್ರಮೇಣ ನಿಲ್ಲಿಸುವ ಪ್ರಯತ್ನ ಇದಾಗಿದೆ. ಇದರ ವಿರುದ್ಧ ನಾವು ಗೆಲ್ಲಿಸಿದ ಸಂಸದರುಗಳು ಮಾತನಾಡದೇ ಇರುವುದು ದುರದೃಷ್ಟಕರ ಎಂದು ಅವರು ಹೇಳಿದರು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಏರಿದ ಮೋದಿ ಸರಕಾರ 12 ವರ್ಷದಲ್ಲಿ 24 ಕೋಟಿ ಉದ್ಯೋಗ ಸೃಷ್ಠಿ ಮಾಡಬೇಕಿತ್ತು. ಆದರೆ ಉದ್ಯೋಗ ಸೃಷ್ಠಿ ಮಾಡಲಿಲ್ಲ ಎಂಬುದು ಮಾತ್ರವಲ್ಲ ಇರುವ ಉದ್ಯೋಗವನ್ನೇ ಕಿತ್ತುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ನ ಈ ಪಾದಯಾತ್ರೆ ಯೋಜನೆಯ ಮರುಸ್ಥಾಪನೆಗೆ ನಾಂದಿಯಾಗಲಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಆಸರೆಯಾಗಿದ್ದ ನರೇಗಾ ಯೋಜನೆಗೆ ಮಾಡಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಬಡ ಮತ್ತು ಕೂಲಿ ಕಾರ್ಮಿಕರಿಗೆ ಭದ್ರತೆ ನೀಡಬೇಕು ಎಂದು ಯುಪಿಎ ಸರಕಾರ ಯೋಜನೆ ಜಾರಿಗೆ ತಂದಿದ್ದು 100 ದಿನ ಕೆಲಸ ಅಥವಾ ಕೆಲಸ ಕೊಡಲು ಸಾಧ್ಯವಾಗದಿದ್ದರೆ, 100 ದಿನದ ಕೂಲಿ ಕೊಡುವ ಯೋಜನೆ ಇದಾಗಿದೆ. ಇದನ್ನು ಕ್ರಮೇಣ ನಿಲ್ಲಿಸುವ ಹುನ್ನಾರ ಕೇಂದ್ರ ಸರಕಾರದ್ದು ಎಂದು ಹರೀಶ್ ಕುಮಾರ್ ಹೇಳಿದರು. ಗ್ರಾಮ ಪಂಚಾಯತ್ಗೂ ನರೇಗಾ ಉತ್ತಮ ಅನುದಾನ

ಮತ್ತು ಹಲವು ಯೋಜನೆ ಮಾಡಲು ಸಹಾಯಕವಾಗಿತ್ತು ಎಂದು ಹೇಳಿದರು.ಯೋಜನೆಯನ್ನು ಪುನರ್ ಸ್ಥಾಪಿಸಲು ಒತ್ತಾಯಿಸಿ ಪ್ರತಿಭಟನಾ ಸೂಚಕವಾಗಿ ಕಾಂಗ್ರೆಸ್ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹರೀಶ್ ಕುಮಾರ್ ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆರ್.ಪದ್ಮರಾಜ ಪೂಜಾರಿ, ಟಿ.ಎಂ.ಶಹೀದ್ ತೆಕ್ಕಿಲ್, ಮಮತಾ ಗಟ್ಟಿ, ಎಂ.ಎಸ್.ಮಹಮ್ಮದ್, ಮಾಜಿ ಶಾಸಕ ಜೆ.ಆರ್.ಲೋಬೋ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಾಂಗ್ರೆಸ್ ಮುಖಂಡರಾದ

ಧನಂಜಯ ಅಡ್ಪಂಗಾಯ, ನಿತ್ಯಾನಂದ ಮುಂಡೋಡಿ, ರಾಧಾಕೃಷ್ಣ ಬೊಳ್ಳೂರು, ಪಿ.ಎಸ್.ಗಂಗಾಧರ, ರಾಜೀವಿ ಆರ್ ರೈ, ಗೀತಾ ಕೋಲ್ಚಾರ್, ಸರಸ್ವತಿ ಕಾಮತ್, ಶಾಲೆಟ್ ಪಿಂಟೋ, ಉಷಾ ಅಂಚನ್, ಅಪ್ಪಿ ಮಂಗಳೂರು, ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆ.ಎಂ.ಮುಸ್ತಫ, ಶಾಫಿ ಕುತ್ತಮೊಟ್ಟೆ,ಚೇತನ್ ಕಜೆಗದ್ದೆ, ಶುಭಾಶ್ಚಂದ್ರ ಕೋಳ್ನಾಡ್, ಸಂಶುದ್ದೀನ್ ಸಾಲ್ಮರ, ಶಶಿಧರ ಹೆಗ್ಡೆ, ವಿನಯರಾಜ್ ಎ.ಸಿ, ಕೆ.ಗೋಕುಲ್ ದಾಸ್, ಎಂ.ವೆಂಕಪ್ಪ ಗೌಡ, ಮಹಮ್ಮದ್ ಕುಂಞಿ ಗೂನಡ್ಕ, ಜಿ.ಕೆ.ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಫೆ.9ರಂದು ಸುಳ್ಯದಿಂದ ಆರಂಭಗೊಂಡ ಪಾದಯಾತ್ರೆ 12ರ ತನಕ ಮೂಲ್ಕಿವರೆಗೆ ನಡೆಯಲಿದೆ.ಪಾದಯಾತ್ರೆ ಆರಂಭಕ್ಕೆ ಮುನ್ನ ಪ್ರಮುಖರು ಗಾಂಧಿನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು








