ಸುಳ್ಯ: ಮುಟ್ಟಾಳೆ ಗ್ರಾಮೀಣರ ಶ್ರಮದ ದ್ಯೋತಕ. ಬಿಸಿಲಿಗೆ ನೆರಳಾಗಿ, ಹೊರೆ ಹೊರುವಾಗ ಹಗುರಾಗಿ ಮುಟ್ಟಾಳೆ ರಕ್ಷಣಾತ್ಮಕ ಕಾರ್ಯ ನಿರ್ವಹಿಸುತ್ತದೆ. ಇಂತಹ ಮುಟ್ಟಾಲೆ ಕಾಂಗ್ರೆಸ್ ರೋಡ್ ಶೋದಲ್ಲಿ ವಿಭಿನ್ನವಾಗಿ ಗಮನ ಸೆಳೆಯಿತು.ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಕಾಂಗ್ರೆಸ್ ಶುಕ್ರವಾರ ರೋಡ್ ಶೋ ನಡೆಸಿ ಮತ ಯಾಚನೆ ನಡೆಸಿತು. ಈ ಸಂದರ್ಭ ಮುಟ್ಟಾಳೆಗೆ ಕಾಂಗ್ರೆಸ್ ರಂಗು ತುಂಬಿ, ಓಡಾಡುತ್ತಿದ್ದ ವ್ಯಕ್ತಿ
ಎಲ್ಲರ ಗಮನ ಸೆಳೆದರು.
ಅವರೇ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರೂ ಚುನಾವಣಾ ಪ್ರಚಾರ ಸಮಿತಿ ಸಹಸಂಚಾಲಕರೂ ಆಗಿರುವ ಗೋಕುಲ್ ದಾಸ್.
ಇಡೀ ದಿನದ ರೋಡ್ ಶೋನಲ್ಲಿ ಓಡಾಡುತ್ತಿದ್ದ ಗೋಕುಲ್ ದಾಸ್ ತಾವು ತೊಟ್ಟಿದ್ದ ಮುಟ್ಟಾಳೆಯಿಂದಲೇ ಗಮನ ಸೆಳೆಯುತ್ತಿದ್ದರು. ಮುಟ್ಟಾಳೆಗೆ ತ್ರಿವರ್ಣ ರಂಗು ತುಂಬಿ, ಮುಂಭಾಗದಲ್ಲಿ ಕೈ ಚಿಹ್ನೆಯನ್ನು
ಅಳವಡಿಸಿದ್ದರು. ಈ ಮೂಲಕ ರೈತರ ಶ್ರಮದ ಸಂಕೇತ, ರಕ್ಷಣೆಯ ದ್ಯೋತಕವಾಗಿರುವ ಮುಟ್ಟಾಳೆ, ಜಿಲ್ಲೆಯ ಕಾಂಗ್ರೆಸ್’ಗೂ ಶಕ್ತಿ ತುಂಬಲಿದೆ. ಕಾಂಗ್ರೆಸ್ ಮುಟ್ಟಾಳೆ ತೊಡುವ ರೈತರ ಜೊತೆಗೂ ಇರಲಿದೆ ಎಂಬ ಸಂದೇಶ ನೀಡಿದರು.
‘ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಅಡಿಕೆ ಬೆಳೆಗಾರರ ಪರವಾಗಿ ಇದ್ದಾರೆ ಎನ್ನುವುದರ ದ್ಯೋತಕವಾಗಿ ಅಡಿಕೆ ಹಾಳೆಯ ಮುಟ್ಟಾಳೆ ಧರಿಸಿದ್ದೇನೆ. ಮುಟ್ಟಾಲೆಗೆ ಕಾಂಗ್ರೆಸ್ ಬಣ್ಣವನ್ನು ತುಂಬಿ ಧರಿಸಿಕೊಂಡಿದ್ದೇನೆ ಎನ್ನುತ್ತಾರೆ ಗೋಕುಲ್ ದಾಸ್.