ಸುಳ್ಯ: ಈ ಬಾರಿಯ ವಿಪರೀತ ಮಳೆ ಕೊಕ್ಕೊಗೆ ತೀವ್ರ ಹೊಡೆತ ನೀಡಿದೆ. ಮೇ ತಿಂಗಳಿನಿಂದ ನಿರಂತರ ಸುರಿದ ಮಳೆಯಿಂದ
ಕೊಕ್ಕೊ ಕಾಯಿ ಕರಟಿ ಹೋಗಿ ಭಾರೀ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು ಕೃಷಿಕರಿಗೆ ನಷ್ಟ ಉಂಟಾಗಿದೆ. ಮಿಡಿ ಹಾಗು ಬೆಳೆದ ಕೊಕ್ಕೊ ಕಾಯಿಗಳು ಕರಟಿ ಹೋಗಿ ನಾಶವಾಗಿರುವ ಕಾರಣ ಜೂನ್, ಜುಲೈ
ತಿಂಗಳಲ್ಲಿ
ದೊರೆಯುತ್ತಿದ್ದ ಫಸಲು ನಷ್ಟವಾಗಿದೆ. ಮೇ.15ರಿಂದ ಜುಲೈ ಕೊನೆಯ ತನಕ ಎಡೆ ಬಿಡದೆ ಸುರಿದ ಭಾರೀ ಮಳೆಯಿಂದ ಬಹುತೇಕ ಕಡೆಗಳಲ್ಲಿ ಕೊಕ್ಕೊ ಕಾಯಿ ಕರಟಿ ಹೋಗಿ ಕಪ್ಪು ಬಣ್ಣಕ್ಕೆ ತಿರುಗಿ ನಾಶವಾಗಿದೆ.ಇದರಿಂದ ಸಾಮಾನ್ಯವಾಗಿ ಉತ್ತಮ ಕೊಕ್ಕೊ ಫಸಲು ಲಭಿಸುತ್ತಿದ್ದ ಜೂನ್, ಜುಲೈ ತಿಂಗಳಲ್ಲಿ ಈ ಬಾರಿ ಕೃಷಿಕರಿಗೆ ಫಸಲೇ ಇಲ್ಲದ ಸ್ಥಿತಿ.ಕೃಷಿಕರಿಗೆ ದಿನ ನಿತ್ಯ ಆದಾಯ ಕೊಡುವ ಮುಖ್ಯ ಮಿಶ್ರ ಬೆಳೆ ಕೊಕ್ಕೊ.ಅಡಿಕೆ ತೋಟಗಳಲ್ಲಿ ಕೊಕ್ಕೊ ಮರಗಳು ಅಡಿಕೆ ಮರಗಳ ಜೊತೆ ಗಳಸ್ಯ ಕಂಠಸ್ಯವಾಗಿ ಬೆಳೆಯುತ್ತದೆ. ತಲ ತಲಾಂತರಗಳಿಂದ ಅಡಿಕೆ ಜೊತೆಗಿನ ಮಿಶ್ರ ಬೆಳೆ ಕೊಕ್ಕೊ.

ಮಳೆಗಾಲದಲ್ಲಿಯೂ ಕೊಕ್ಕೊ ಸಾಮಾನ್ಯ ಫಸಲು ಬರುತ್ತಿತ್ತು. ಆದರೆ ತೀವ್ರ ಮಳೆಯ ಪರಿಣಾಮ ಈ ಬಾರಿ ಕೊಕ್ಕೊ ಕೈಕೊಟ್ಟಿದೆ. ಕೊಕ್ಕೊ ಮಿಡಿ ಕಾಯಿಗಳು ಸಂಪೂರ್ಣ ನಾಶವಾಗಿ ಹೋಗಿದೆ. ಸಾಮಾನ್ಯ ಬೆಳೆದ ಕೊಕ್ಕೊ ಕಾಯಿಗಳು ಕೂಡ ಕೊಳೆತು ಹೋಗಿದೆ. ಕಪ್ಪು ಬಣ್ಣಕ್ಕೆ ತಿರುಗಿ ಕರಟಿ ನಿಂತಿದೆ. ಹಲವು ತೋಟಗಳಲ್ಲಿ ಕೊಕ್ಕೋ ಮರದಲ್ಲಿ ಕರಟಿದ ಕಪ್ಪು ಕಾಯಿಗಳೇ ಕಾಣುತ್ತದೆ.
ಕಳೆದ ವರ್ಷ ದಾಖಲೆ ದರ ದೊರೆತು ಕೆಜಿಗೆ 330 ರೂವರೆಗೆ ಇದ್ದ ಕೊಕ್ಕೊ ದರ ಈಗ 95-100ರ ಆಸುಪಾಸಿನಲ್ಲಿದೆ. ಮಳೆ ವಿಪರೀತ ಸುರಿದ ಕಾರಣ ಕೊಕ್ಕೊ ಕಾಯಿಗಳೆಲ್ಲ ಕರಟಿ ಹೋದ ಕಾರಣ ಮಾರಾಟಕ್ಕೆ ಕೊಕ್ಕೊ ಸಿಗಲೇ ಇಲ್ಲಾ ಎನ್ನುತ್ತಾರೆ ಕೃಷಿಕರು. ಜೂನ್,ಜುಲೈ ತಿಂಗಳಲ್ಲಿ ದೊರೆಯಬೇಕಾಗಿದ್ದ ಶೇ.50ಕ್ಕಿಂತಲೂ ಅಧಿಕ ಬೆಳೆ ನಾಶವಾಗಿದೆ ಎನ್ನುತ್ತಾರೆ ಕೃಷಿಕರಾದ ಜಯಪ್ರಕಾಶ್ ಕುಕ್ಕೇಟ್ಟಿ.

ವರ್ಷದಲ್ಲಿ 8-9 ತಿಂಗಳ ಕಾಲ ಫಸಲು ಕೊಡುವ ಬೆಳೆ ಕೊಕ್ಕೊ. ಆದರೆ ಈ ಬಾರಿ ಸುಮಾರು ಎರಡು ತಿಂಗಳ ಬೆಳೆ ನಷ್ಟವಾಗಿದೆ ಎನ್ನುತ್ತಾರೆ ಅವರು.
ಉತ್ತಮ ಮಿಶ್ರ ಬೆಳೆಯಾದರೂ ಹಲವು ಸಮಸ್ಯೆಗಳು ಕೊಕ್ಕೊ ಬೆಳೆಯನ್ನು ಕಾಡುತ್ತಾ ಇರುತ್ತದೆ. ಮಳೆ ಅಧಿಕ ಆದರೆ ಕೊಕ್ಕೊ ಕಾಯಿ ಕರಗುವುದು, ಮಂಗ, ಅಳಿಲು, ಕಬ್ಬೆಕ್ಕು ಮತ್ತಿತರ ಪ್ರಾಣಿಗಳ ಉಪಟಳದಿಂದ ಕೊಕ್ಕೊ ಫಸಲು ಕಡಿಮೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲಾ ಎಂಬ ಸ್ಥಿತಿ ಕೃಷಿಕರದ್ದು. ಮಳೆ ಬಂದ ಕೂಡಲೇ

ಕೊಕ್ಕೊಗೆ ಕೊಳೆ ರೋಗ ಬಾದಿಸುತ್ತದೆ.ಕೊಕ್ಕೊ ಕಾಯಿ ಕಪ್ಪು ಬಣ್ಣಕ್ಕೆ ತಿರುಗಿ ನಶಿಸಿ ಹೋಗುತ್ತದೆ. ಬೋಡೋ ಮಿಶ್ರಣ ಸಿಂಪಡಿಸಿದರೆ ಕೊಳೆ ರೋಗವನ್ನು ನಿಯಂತ್ರಿಸಬಹುದು. ಆದರೆ ಬೋಡೋ ಸಿಂಪಡಿಸಿದರೂ ಈ ಬಾರಿಯ ಮಳೆಯ ಹೊಡೆತ ತಾಳಲಾರದೆ ಕೊಕ್ಕೊ ಕೃಷಿ ನಶಿಸಿ ಹೋಗಿದೆ ಎನ್ನುತ್ತಾರೆ ಕೃಷಿಕರು.






