ಬೆಂಗಳೂರು:ಪಕ್ಷದ ಹೈಕಮಾಂಡ್ನವರು ಏನು ಹೇಳುತ್ತಾರೊ ಅದನ್ನು ಕೇಳಲು ನಾವಿಬ್ಬರೂ ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಶನಿವಾರ ಬೆಳಿಗ್ಗೆ ‘ಉಪಾಹಾರ’ ಸಭೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೈಕಮಂಡ್ನವರು ಏನು ನಿರ್ದೇಶನ ಕೊಡುತ್ತಾರೊ ಆ ರೀತಿ
ಮಾಡಿಕೊಂಡು ಹೋಗುತ್ತೇವೆ’ ಎಂದರು.ಅಧಿವೇಶನ ಇರುವುದರಿಂದ ನಮಗೆ ಇಬ್ಬರಿಗೂ ಗೊಂದಲಗಳನ್ನು ತಿಳಿ ಮಾಡಲು ಹೈಕಮಂಡ್ನವರು ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ.ಈಗಲೂ ಇಲ್ಲ ಎಂದರು. 2028ರ ವಿಧಾನಸಭೆ ಚುನಾವಣೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ನಮಗೆ ಬಹಳ ಮುಖ್ಯ. ಈ ಬಗ್ಗೆ ನಾವಿಬ್ಬರೂ ಚರ್ಚೆ ಮಾಡಿದ್ದೇವೆ. ನಾವಿಬ್ಬರೂ 2023ರ ಚುನಾವಣೆಯಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಮುಂದೆಯೂ ಒಟ್ಟಿಗೆ ಹೋಗಲು ತೀರ್ಮಾನಿದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಗೊಂದಲವೂ ಇಲ್ಲ’ ಎಂದರು.
ಡಿ.ಕೆ. ಶಿವಕುಮಾರ್ ಮಾತನಾಡಿ,‘ಹೈಕಮಂಡ್ನವರು ಏನು ಹೇಳುತ್ತಾರೊ ಅದೇ ರೀತಿ ಕೆಲಸ ಮಾಡಿಕೊಂಡು ಹೋಗಲು ತೀರ್ಮಾನಿಸಿದ್ದೇವೆ’ ಎಂದರು.‘ನಮ್ಮಲ್ಲಿ ಗುಂಪು ಇಲ್ಲ. ನಮ್ಮದು ಕಾಂಗ್ರೆಸ್ ಗುಂಪು. ಒಟ್ಟಿಗೆ ಸೇರಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಶಾಸಕರನ್ನು, ಪಕ್ಷವನ್ನು ಶಕ್ತಿ ಶಾಲಿ ಬೆಳೆಸುತ್ತೇವೆ’ ಎಂದರು.‘ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರನ್ನು ಎದುರಿಸಲು ಪ್ರತಿತಂತ್ರ ರೂಪಿಸಿದ್ದೇವೆ’ ಎಂದರು.
ನಾಯಕತ್ವ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಪರಸ್ಪರ ಮಾತುಕತೆ ನಡೆಸುವಂತೆ ಹೈಕಮಾಂಡ್ ನೀಡಿರುವ ಸೂಚನೆ ಮೇರೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಶನಿವಾರ ಬೆಳಿಗ್ಗೆ ಸಿದ್ದರಾಮಯ್ಯ ಅವರು ಉಪಾಹಾರ ಸಭೆ ನಡೆಸಿದರು. ನಿಗದಿಯಂತೆ ಬೆಳಿಗ್ಗೆ 10 ಗಂಟೆಗೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮತ್ರಿಯವರ ನಿವಾಸಕ್ಕೆ ಬಂದರು. ತಮ್ಮ ಆಹ್ವಾನದಂತೆ ‘ಕಾವೇರಿ’ಗೆ ಬಂದ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಆತ್ಮೀಯವಾಗಿ ಸ್ವಾಗತಿಸಿದರು.ಉಭಯ ನಾಯಕರು ಸುಮಾರು 45 ನಿಮಿಷ ಮಾತುಕತೆ ನಡೆಸಿದರು.













