ಸುಳ್ಯ: ಸಿಐಟಿಯು ಮತದಾನಕ್ಕೆ ಮೊದಲು ಜನರ ನೈಜ ಸಮಸ್ಯೆಯನ್ನು ಮುಂದಿಡುತ್ತೇವೆ. ಆ ನಿಟ್ಟಿನಲ್ಲಿ ಸಮಸ್ಯೆ ಅರಿತುಕೊಂಡು ಬಡವರು, ಕಾರ್ಮಿಕರು, ಮದ್ಯಮ ವರ್ಗದವರು ಮತ ಚಲಾವಣೆ ಮಾಡಬೇಕು ಎಂದು ಸಿಐಟಿಯು ಅಧ್ಯಕ್ಷ ಕೆ.ಪಿ.ಜಾನಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾರ್ಮಿಕರ 8 ಗಂಟೆಯ ದುಡಿಮೆಯನ್ನು 12 ಗಂಟೆಗೆ ಏರಿಸಿದವರ ವಿರುದ್ದ ಮತದಾನ
ಮಾಡಬೇಕು. 2014ರಲ್ಲಿ 410 ರೂ ಇದ್ದ ಅಡುಗೆ ಗ್ಯಾಸ್ ದರವನ್ನು 1200 ರೂಪಾಯಿಗೆ ಏರಿಸಿದವರ ವಿರುದ್ದ ಕಾರ್ಮಿಕರು, ಬಡವರು ಮತ ನೀಡಬೇಕು. 2014ರಲ್ಲಿ 50 ರೂಪಾಯಿ ಇದ್ದ ಡಿಸೇಲ್ ದರ 88 ರೂ ಗೆ ಏರಿಕೆ ಆಗಿದೆ.66 ಇದ್ದ ಪೆಟ್ರೋಲ್ ದರ 102 ರೂ ಗೆ ಏರಿಸಲಾಗಿದೆ. ಅನ್ನಭಾಗ್ಯದ ಅಕ್ಕಿಯನ್ನು ಕಡಿತ ಮಾಡಲಾಗಿದೆ. ಕಾರ್ಮಿಕರು ಮತ್ತು ಜನರು ಉಪಯೋಗಿಸುವ ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ. ಅಲ್ಲದೆ ಜಿಎಸ್ಟಿ ಹಾಕಲಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಭದ್ರತೆಗಾಗಿ ಸಂಗ್ರಹಿಸಲ್ಪಟ್ಟ ಹಣ ಅತೀ ಅಗತ್ಯವಾದ ವಿಚಾರಗಳಿಗೆ ಅರ್ಜಿ ಹಾಕಿ ಕಾಯುತ್ತಿದ್ದರೂ ಬಿಡುಗಡೆ ಮಾಡಿಲ್ಲ. ಕಾರ್ಮಿಕರ ಕಾನೂನುಗಳನ್ನು ಮಾಲಿಕರ ಪರ ತಿದ್ದುಪಡಿ ಮಾಡಲಾಗಿದೆ. ದೊಡ್ಡ ದೊಡ್ಡ ರೋಗಗಳ ಔಷಧ ಬೆಲೆಯನ್ನು ಗಗನಕ್ಕೇ ಏರಿಸಲಾಗಿದೆ. ಇನ್ಶೂರೆನ್ಸ್ ದರವನ್ನು ಅಮಾನವೀಯವಾಗಿ ಏರಿಸಲಾಗಿದೆ. ರೈತರ ಸಾಲ ಮನ್ನಾ ಮಾಡಿ ಎಂದು ಅನೇಕ ಬಾರಿ ಅಲವತ್ತುಕೊಂಡರೂ ಪ್ರತಿಭಟನೆಗಳು ಮಾಡಿದರೂ ಕೇಳದೆ ಖಾಸಗಿ ಕಂಪೆನಿ ಮಾಲೀಕರ ಸುಮಾರು 10 ಲಕ್ಷ ಕೋಟಿಗೂ ಅಧಿಕ ಸಾಲ ಮನ್ನಾ ಮಾಡಿ ತಾವು ಯಾರ ಪರವೆಂದು ತೋರಿಸಿದವರ ವಿರುದ್ಧ ನಮ್ಮ ಮತವಾಗಬೇಕು. ೨೦೧೪ ಗ್ರಾಮೀಣ ಭಾಗದ ಜನರಿಗೆ ಸಹಾಯಕವಾಗಿದ್ದ ಬಿ.ಎಸ್.ಎನ್.ಎಲ್. ಸಂಸ್ಥೆಯನ್ನು ಪ್ರಸ್ತುತ ಮುಚ್ಚುವ ಹಂತಕ್ಕೆ ತಂದವರ ವಿರುದ್ಧ ನಮ್ಮ ಮತವಾಗಬೇಕು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರು, ಬಡವರಿಗೆ ತೊಂದರೆಯನ್ನುಂಟು ಮಾಡಿರುವವರ ವಿರುದ್ಧ ಮತ ಚಲಾಯಿಸಬೇಕು ಎಂದು ಅವರು ವಿವರ ನೀಡಿದರು.
ಪತ್ರಿಕಾಗೋಷ್ಠೀಯಲ್ಲಿ ಮುಖಂಡರುಗಳಾದ ಶ್ರೀಧರ ಎ.ಕೆ. ಕಡಪಾಲ, ನಾರಾಯಣ ಮೇಸ್ತ್ರೀ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಗೌರವಾಧ್ಯಕ್ಷ ನಾಗರಾಜ ಮೇಸ್ತ್ರೀ, ಬಿ.ಆರ್. ಪ್ರಸಾದ್ ಇದ್ದರು.