ಸುಳ್ಯ: ಪಕ್ಷ ಸಂಘಟನೆಗೆ ಸುಳ್ಯ ಮಾದರಿ ಹಾಗೂ ಪ್ರೇರಣಾದಾಯಿ ಕ್ಷೇತ್ರ. ಕಾರ್ಯಕರ್ತರ ನಿರಂತರ ಪ್ರಯತ್ನ ಮತದಾರರ ಜೊತೆಗಿನ ಒಡನಾಟದಿಂದ ಚುನಾವಣೆಯಲ್ಲಿ ಸುಳ್ಯದಲ್ಲಿ ಬಿಜೆಪಿಗೆ ಈ ರೀತಿಯ ಗೆಲುವು ಹಾಗೂ ಅಂತರ ಪಡೆಯಲು ಸಾಧ್ಯವಾಗುತಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸಂಸದರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಅವರು ಬಿಜೆಪಿ ಕಚೇರಿಯಲ್ಲಿ ಪ್ರಮುಖರನ್ನು ಭೇಟಿ ಮಾಡಿ ಕಾರ್ಯಕರ್ತರನ್ನು
ಅಭಿನಂದಿಸಿ ಮಾತನಾಡಿದರು.ಈ ಚುನಾವಣಾ ಗೆಲುವು ನನ್ನದಲ್ಲ, ಇದು ಕಾರ್ಯಕರ್ತರ, ಸಂಘಟನೆಯ ಗೆಲುವು. ದ.ಕ.ಕ್ಷೇತ್ರದಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ ಒಂದೂವರೆ ಲಕ್ಷದ ಅಂತರದ ಗೆಲುವು ಪಡೆಯಲು ಪ್ರಧಾನಿ ಮೋದಿ ಅವರ ವಿಚಾರಗಳು ಜನ ಮಾನಸಕ್ಕೆ ಮುಟ್ಟಿರುವುದು ಮತ್ತು ಕಾರ್ಯಕರ್ತರ ಅವಿರತ ಪ್ರಯತ್ನ ದಿಂದ ಸಾಧ್ಯವಾಗಿದೆ.ಕೇಂದ್ರ ಸರಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದ ಅವರು ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಎಂಬ ನಾಟಕದಿಂದ ಒಂದು ಕಡೆಯಿಂದ ಕೊಟ್ಟು ಇನ್ನೊಂದು ಕಡೆಯಿಂದ ಕಿತ್ತುಕೊಳ್ಳುವ ಪ್ರಯತ್ನ ನಡೆಯುತಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಸಮಸ್ಯೆ ಹಾಗೂ ಅವಕಾಶವನ್ನು ಅರ್ಥ ಮಾಡಿಕೊಂಡಿದ್ದೇನೆ. ಕಾರ್ಯಕರ್ತರ ಭೇಟಿ, ಜನರ ಸಮಸ್ಯೆಯನ್ನು ಅರಿಯುವ ನಿಟ್ಟಿನಲ್ಲಿ ಸುಳ್ಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸ ಹಮ್ಮಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವಿನ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕರ್ತರ ಅಭಿನಂದನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ ಪಕ್ಷದಿಂದ ಯಾರು ಗೆದ್ದರೂ ಅದು ಬಿಜೆಪಿಯ ಗೆಲುವು.ಬಹಳ ದೊಡ್ಡ ನಿರೀಕ್ಷೆಯನ್ನಿಟ್ಟು ಜನರು ಬಿಜೆಪಿಯನ್ನು ಗೆಲ್ಲಿಸುತ್ತಾರೆ. ಕಾರ್ಯಕರ್ತರ ಹಾಗೂ ಜನರ ಜೊತೆ ನಿರಂತರ ಸಂಪರ್ಕ ಇರಿಸುವ ಮೂಲಕ ಜನರ, ಕಾರ್ಯಕರ್ತರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅದರ ಪರಿಹಾರಕ್ಕೆ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ರೈ ಮನವಳಿಕೆ ವಂದಿಸಿ, ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.