ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್ನ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ ಏಂಡ್ ರೊಬೋಟಿಕ್ ಲಿವರ್ ಟ್ರಾನ್ಸ್ಪ್ಲಂಟ್ ವಿಭಾಗ ಆರಂಭಗೊಂಡಿದೆ. ಜನ ಸಾಮಾನ್ಯ ಬಡವರಿಗೆ ಕರುಳು ಬದಲಾಯಿಸುವ ಚಿಕಿತ್ಸಾ ಹೊರೆ ಭರಿಸಲಿಕ್ಕಾಗದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಕ್ಕೆ ಉತ್ತಮ ಚಿಕಿತ್ಸಾ ಸೌಲಭ್ಯ ದೊರೆಯಬೇಕೆಂಬ ಕಾಳಜಿಯೊಂದಿಗೆ “ರೀಲಿವರ್” ಯೋಜನೆಯಂಗವಾಗಿ ನೂತನ ಘಟಕ ಆರಂಭಗೊಂಡಿದೆ.ಎಳೆಯ ಮಕ್ಕಳ ಸಹಿತ ಕರುಳು ಬದಲಾಯಿಸುವ
ಶಸ್ತ್ರಚಿಕಿತ್ಸಾ ಸೌಲಭ್ಯಕ್ಕಾಗಿ ಅನ್ಯರಾಜ್ಯಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿಯನ್ನು ತಪ್ಪಿಸಲು ಮತ್ತು ನಮ್ಮ ನಾಡಿನ ಜನತೆಗೆ
ವಿನೂತನ ಸೌಕರ್ಯದ ಉನ್ನತ ಚಿಕಿತ್ಸೆ ಒದಗಿಸಲು ರೊಬೋಟಿಕ್ ಸೌಲಭ್ಯವನ್ನು ಬಿಎಂಚ್ ನಾಡಿಗೆ ಒದಗಿಸುತ್ತಿದೆ. ಮಲಯಾಳಂನ ಜನಪ್ರಿಯ ನಟ ಮೋಹನಲಾಲ್ ನೇತೃತ್ವದ ವಿಶ್ವಶಾಂತಿ ಫೌಂಡೇಷನ್ ಜತೆ ಸಹಭಾಗಿತ್ವ ಹೊಂದಿ ಬಡವರಿಗೆ ಈ ಮೂಲಕ ವಿಶೇಷ ರಿಯಾಯಿತಿಯ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಜೀವದುಸಿರು ಕಾಪಾಡಲು ಮೌನವಾಗಿ ಹೋರಾಡುತ್ತಿರುವ ಬಡಜನತೆಗೆ ಇದೊಂದು ಕಾಣಿಕೆ ಎಂದು ನಟ ಮೋಹನ್ ಲಾಲ್ ಹೇಳಿದರು. ತನ್ನ ಜನ್ಮದಿನದಂದು ವೀಡಿಯೋ ಕಾನ್ಫೆರೆನ್ಸ್ ಮೂಲಕ ಅವರು ಸಮಾರಂಭದಲ್ಲಿ ಪಾಲ್ಗೊಂಡರು.

ದೇಶದ ಪ್ರಮುಖ ಕರುಳು ಬದಲಾವಣಾ ತಜ್ಞ ಡಾ. ಜೋಯ್ ವರ್ಗೀಸ್ ನೇತೃತ್ವದ ತಜ್ಞ ವೈದ್ಯರ ತಂಡ ನೂತನ ಘಟಕವನ್ನು ಮುನ್ನಡೆಸುವರು.
1500ಕ್ಕೂ ಅಧಿಕ ಅವಯವ ಶಸ್ತ್ರಕ್ರಿಯೆ ನಡೆಸಿರುವ ಅವರು ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ದಶಕಗಳಿಂದ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದಾರೆ.ಡಾ.ವಿವೇಕ್ ವಿಜ್ ಸಹಿತವಾದ ಅವಯವ ಬದಲಾವಣೆ ತಜ್ಞರು ಈ ಘಟಕದ ಅಂಗವಾಗಿದ್ದಾರೆ.ಅವಯವ ದಾನ ಮಾಡುವವರ ಸುರಕ್ಷೆಯನ್ನು ನೂರು ಶೇಕಡಾ ಕಾಪಾಡುವುದರಲ್ಲಿ ಡಾ.ವಿವೇಕ್ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ಪಡೆದವರಾಗಿದ್ದಾರೆ.
ಆಸ್ಪತ್ರೆ ಚೇರ್ಮೆನ್ ಹಾಗೂ ಆಡಳಿತ ನಿರ್ದೇಶಕ ಡಾ ಕೆ.ಜಿ.ಅಲೆಕ್ಸಾಂಡರ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ನೂತನ ಕಾಲಘಟ್ಟದ ಬದಲಾವಣೆಗಳನ್ನು ಅನುಸರಿಸಿ ಆಧುನಿಕ ತಂತ್ರಜ್ಞಾನದ ಸೌಲಬ್ಯಗಳನ್ನು ಇನ್ನಷ್ಟು ಅಳವಡಿಸುವುದಾಗಿ ಅವರು ತಿಳಿಸಿದರು.
ಪೀಡಿಯಾಟ್ರಿಕ್ ಲಿವರ್ ಟ್ರಾನ್ಸ್ಪ್ಲಂಟ್ ಅಗತ್ಯ ಇರುವವರಿಗೆಲ್ಲಾ ಲಭ್ಯ ಅಲ್ಲವೆಂದೂ, ಕರುಳು ಬದಲಾಯಿಸಿದ ಬಳಿಕದ ಚಿಕಿತ್ಸೆಯೂ ನಿರ್ಣಾಯಕವೆಂದು ಡಾ.ಜೋಯ್ ವರ್ಗೀಸ್ ನುಡಿದರು. ಈ ಮೊದಲು ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕರುಳು ಬದಲಾಯಿಸಿಕೊಂಡು ನವಜೀವನಕ್ಕೆ ಕಾಲಿಟ್ಟವರು ತಮ್ಮ ಚಿಕಿತ್ಸಾ ಅನುಭವ ಹಂಚಿಕೊಂಡರು. ಆಸ್ಪತ್ರೆ ಸಿಇಒ ಡಾ.ಅನಂತ ಮೋಹನ್ ಪೈ, ಡಾ.ವಿವೇಕ್ ವಿಜ್, ಡಾ.ಎ.ಕೆ.ಬಿಜು, ಡಾ.ಶೈಲೇಶ್ ಐಕೋಟ್, ವಿಶ್ವಶಾಂತಿ ಫೌಂಡೇಷನ್ ಪ್ರತಿನಿಧಿ ಅನುರಾಜ್ ಉಪಸ್ಥಿತರಿದ್ದು ಮಾತನಾಡಿದರು.





