ಮೆಲ್ಬರ್ನ್: ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯು ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿತು.
ಇದರೊಂದಿಗೆ 43 ವರ್ಷದ ಬೋಪಣ್ಣ, ಪುರುಷ ಟೆನಿಸ್ ವಿಭಾಗದಲ್ಲಿ ಗ್ರ್ಯಾನ್ಸ್ಲಾಮ್ ಗೆದ್ದ ಅತಿ ಹಿರಿಯ ಆಟಗಾರ ಎನಿಸಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಬೋಪಣ್ಣ ಜೋಡಿಯು, ಇಟಲಿಯ
ಸಿಮೋನೆ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ ಅವರನ್ನು 7-6(0) 7-5 ರಿಂದ ಸೋಲಿಸಿತು.ಒಂದು ತಾಸು 39 ನಿಮಿಷಗಳಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಎದುರಾಳಿಯನ್ನು ಮಣಿಸಿತು.
ಆ ಮೂಲಕ ಬೋಪಣ್ಣ ಅವರು, ಪುರುಷ ಡಬಲ್ಸ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಎಂದೆನಿಸಿದ್ದಾರೆ.
ಈ ಹಿಂದೆ ದಿಗ್ಗಜರಾದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಪುರುಷರ ಡಬಲ್ಸ್ ವಿಭಾಗದಲ್ಲಿ ಗ್ರ್ಯಾನ್ಸ್ಲಾಮ್ ಕಿರೀಟ ಜಯಿಸಿದ್ದರು. ಇನ್ನು ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಪ್ರಶಸ್ತಿ ಗೆದ್ದಿದ್ದರು.2017ರಲ್ಲಿ ಬೋಪಣ್ಣ ಅವರು ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದರು.ವಿಶ್ವ ಪುರುಷರ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಬೋಪಣ್ಣ ಅಗ್ರಸ್ಥಾನಕ್ಕೇರುವುದು ಈಗಾಗಲೇ ಖಚಿತವಾಗಿದೆ. ಸೋಮವಾರ ಹೊಸ ರ್ಯಾಂಕಿಂಗ್ ಪಟ್ಟಿ ಪ್ರಕಟವಾಗಲಿದೆ. ಈ ಸ್ಥಾನಕ್ಕೇರಲಿರುವ ಅತಿ ಹಿರಿಯ ವಯಸ್ಸಿನ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಲಿದ್ದಾರೆ.









