ಸುಳ್ಯ:ತನ್ನ ಅವಧಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 15 ಕೆಲಸಗಳಿಗೆ 45.50 ಲಕ್ಷ ಅನುದಾನ ನೀಡಿದ್ದೇನೆ. ನಿರ್ದಿಷ್ಟ ಕಾಮಗಾರಿಗಳನ್ನು ಸೂಚಿಸಿದಲ್ಲಿ ಅನುದಾನ ನೀಡಲು ಸಿದ್ಧನಿದ್ದೇನೆ. ಸುಳ್ಯ ಪುರಭವನದ ಅಭಿವೃದ್ಧಿಗೆ ಅನುದಾನ ನೀಡಲು ಸಿದ್ಧ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ
ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ತನ್ನ ಕ್ಷೇತ್ರದಲ್ಲಿ ಒಟ್ಟು 13 ವಿಧಾನಸಭಾ ಕ್ಷೇತ್ರದಲ್ಲಿ 385 ಗ್ರಾಮಗಳಿವೆ. ತನಗೆ ಪ್ರತಿ ವರ್ಷ ತಲಾ ಎರಡು ಕೋಟಿಯಂತೆ 6 ವರ್ಷದಲ್ಲಿ 12 ಕೋಟಿ ಅನುದಾನ ಬರೆಯಲಿದೆ.ಇದು ಎಲ್ಲಾ ಕ್ಷೇತ್ರಗಳಿಗೂ ಅಂದರೆ 26 ಬ್ಲಾಕ್ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಿಗೆ ಸಮಾನವಾಗಿ ಹಂಚಲಾಗುವುದು ಎಂದು ಅವರು ಹೇಳಿದರು. ಯಾವುದಾದರೂ ನಿರ್ದಿಷ್ಟ ಯೋಜನೆಗಳ ಬಗ್ಗೆ ಸೂಚನೆ ನೀಡಿದರೆ ಸಂಬಂಧಪಟ್ಟ ಸಚಿವರಿಗೆ ಹಾಗೂ ಇಲಾಖೆಗಳ ಜೊತೆ ಚರ್ಚಿಸಿ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ಸುಳ್ಯ ನಗರದ ಪುರಭವನದ ಅಭಿವೃದ್ಧಿಗೆ ನೀಲಿ ನಕಾಶೆ ನೀಡಿದಲ್ಲಿ ಅನುದಾನ ನೀಡಲಾಗುವುದು ಎಂದರು.
ಈ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದ ಅವರು ಕಾಂಗ್ರೆಸ್ ಪಕ್ಷ ಸಂಘಟನೆಗೆ ಎಲ್ಲಾ ಕಾರ್ಯಕರ್ತರು ಕೈ ಜೋಡಿಸಬೇಕು. ಬ್ಲಾಕ್ ಕಾಂಗ್ರೆಸ್ ಜೊತೆಗೆ ಎಲ್ಲಾ ಘಟಕಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮುಖಂಡರಾದ ಧನಂಜಯ ಅಡ್ಪಂಗಾಯ, ಡಾ.ರಘು, ಸರಸ್ವತಿ ಕಾಮತ್, ಕೆ.ಎಂ.ಮುಸ್ತಫ, ಶುಭಾಶ್ಚಂದ್ರ ಕೊಳ್ನಾಡು, ಇಸ್ಮಾಯಿಲ್ ಪಡ್ಪಿನಂಗಡಿ, ಕೆ.ಪಿ.ಜಾನಿ ಕಲ್ಲುಗುಂಡಿ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಜಯಪ್ರಕಾಶ್ ನೆಕ್ರಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.