ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೋಳ್ಳೂರು ನೇಮಕಗೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೊಳ್ಳೂರು ಅವರನ್ನು ನೇಮಕ ಮಾಡಿ ಆದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಫೆ.16ರಂದು ಮಧ್ಯಾಹ್ನ ನೂತನ ಬ್ಲಾಕ್ ಅಧ್ಯಕ್ಷರಾಗಿ
ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ
ರಾಧಾಕೃಷ್ಣ ಬೊಳ್ಳೂರು ಅವರನ್ನು ಕಳೆದ ವರ್ಷ ಫೆ.15ರಂದು ನೇಮಕ ಮಾಡಿ ಆದೇಶ ಮಾಡಲಾಗಿತ್ತು.ಇದಕ್ಕೆ ವಿರೋಧ ವ್ಯಕ್ತಪಡಿಸಿ ಸುಳ್ಯದ ಕೆಲವು ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿಗೆ ಹೋಗಿ ನೇಮಕದ ಬಗ್ಗೆ ತಮ್ಮ ಅಸಮಾಧಾನ ಮತ್ತು ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಧಾಕೃಷ್ಣ ಬೊಳ್ಳೂರು ಅವರ ನೇಮಕ ಜಾರಿಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಬಳಿಕ ಕೆಪಿಸಿಸಿ ಅಧ್ಯಕ್ಷರು ನೇಮಕ ಮಾಡಿದ ಕೆಪಿಸಿಸಿ ಉಪಸಮಿತಿ ಸುಳ್ಯ ಹಾಗೂ ಮಂಗಳೂರಿನಲ್ಲಿ ಸಭೆ ನಡೆಸಿ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿಗೆ ವರದಿ ಸಲ್ಲಿಸಿದ್ದರು. ಈ ವರದಿಯ ಹಿನ್ನಲೆಯಲ್ಲಿ ಇದೀಗ ಒಂದು ವರ್ಷದ ಬಳಿಕ ಬೊಳ್ಳೂರು ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷರು ಆದೇಶ ಮಾಡಿದ್ದಾರೆ.
ಡಿಸಿಸಿ ಕಾರ್ಯದರ್ಶಿಯಾಗಿರುವ ಬೊಳ್ಳೂರು ಈ ಹಿಂದೆ
ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಪಿಎಂಸಿ ಉಪಾಧ್ಯಕ್ಷರಾಗಿ, ಅಮರ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತಾಲೂಕ್ ಪಂಚಾಯತ್ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ ಡಿ ಪಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್ ಮುಖಂಡರಾಗಿದ್ದ ಬೊಳ್ಳೂರು ಕಾಂಗ್ರೆಸ್ ನೇತೃತ್ವದೊಂದಿಗೆ ಮುನಿಸಿಕೊಂಡು ಕೆಲವು ವರ್ಷಗಳ ಹಿಂದೆ ಬಿಜೆಪಿ ಸೇರ್ಪಡೆಗೊಂಡು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ
ಹುದ್ದೆಗಳ ಅಲಂಕರಿಸಿದ್ದರು. ಬಳಿಕ 3 ವರ್ಷಗಳ ಹಿಂದೆ ಮತ್ತೆ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದರು. ಬಳಿಕ ಪಕ್ಷ ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು. ಇದೀಗ ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್ ಅಧ್ಯಕ್ಷತೆ ನೀಡಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಿ.ಸಿ.ಜಯರಾಮ ಅವರ ಅವಧಿ ಮುಗಿದ ಹಿನ್ನಲೆಯಲ್ಲಿ ಇದೀಗ ಹೊಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡಲಾಗಿದೆ.




