ಸುಳ್ಯ:ಪಕ್ಷದಲ್ಲಿ ಸ್ಥಾನ, ಮಾನ, ಸರಕಾರದಲ್ಲಿ ಅಧಿಕಾರದ ಆಸೆ ತಪ್ಪಲ್ಲ. ಆದರೆ ಅದು ಮಿತಿ ಮೀರಬಾರದು.ಈಗ ಅಧಿಕಾರದ ಆಸೆ ಜಾಸ್ತಿಯಾಗಿದೆ.ತಮಗೆ ಅಧಿಕಾರ, ಸ್ಥಾನ ಮಾನ ಸಿಕ್ಕಿಲ್ಲ ಎಂದು ಹಲವು ರಾಜಿನಾಮೆ ಪತ್ರಗಳು ಸುಳ್ಯ ಸೇರಿ ಹಲವೆಡೆಯಿಂದ ಬರುತ್ತವೆ. ಆದರೆ ಯಾರು ರಾಜಿನಾಮೆ ಕೊಟ್ಟರೂ ಕಾಂಗ್ರೆಸ್ ಪಕ್ಷಕ್ಕೆ ಏನು ಆಗುವುದಿಲ್ಲ, ಕಾಂಗ್ರೆಸ್ ಪಕ್ಷವನ್ಮು ಇಲ್ಲದಂತೆ ಮಾಡಲು
ಯಾರಿಂದಲೂ ಸಾಧ್ಯವಿಲ್ಲ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ. ಫೆ.16ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆದ ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.ಪಕ್ಷದಲ್ಲಿ ಶಿಸ್ತು ಮುಖ್ಯ. ವಾಟ್ಸಾಪ್ ಸಂದೇಶ ಪಕ್ಷ ಸಂಘಟನೆಗೆ ದೊಡ್ಡ ತಲೆ ನೋವು ಎಂದ ಅವರು ಅನಗತ್ಯ ಸಂದೇಶ ಕಳಿಸಿ ಗೊಂದಲ ಸೃಷ್ಠಿಸುವ ವಾಟ್ಸಾಪ್ ಯೂನಿವರ್ಸಿಟಿಗಳ ಬಗ್ಗೆ ಎಚ್ಚರ ಇರಲಿ, ಈ ರೀತಿ ಅನಗತ್ಯ ಸಂದೇಶ ಕಳಿಸುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಸಣ್ಣಪುಟ್ಟ ಭಿನ್ನಾಭಿಪ್ರಾಯ, ಗೊಂದಲಗಳು ಸಹಜ ಅದನ್ನೆಲ್ಲ ಸರಿಪಡಿಸಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ’ ಸುಳ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಇರಲಿಲ್ಲ, ಅಭಿಪ್ರಾಯ ವ್ಯತ್ಯಾಸಗಳು ಇತ್ತು ಅಷ್ಟೇ. ಅದನ್ನು ಸರಿಪಡಿಸಿ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ಮುಳ್ಳಿನ ಹಾಸಿಗೆ ಎಂದ ಅವರು ಕಾಂಗ್ರೆಸ್ನವರು ಜನರ ಕೆಲಸ ಮಾಡುತ್ತಾರೆ, ಆದರೆ ಪ್ರಚಾರ ಪಡೆಯುವುದಿಲ್ಲ, ಬಿಜೆಪಿಯವರು ಪ್ರಚಾರದಿಂದಲೇ ಚುನಾವಣೆ ಗೆಲ್ಲುತ್ತಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಒತ್ತು ನೀಡಲಾಗುವುದು. ವಿವಿಧ ಇಲಾಖೆಗಳಿಂದ ಜನರಿಗೆ, ಕಾರ್ಯಕರ್ತರಿಗೆ ಅನ್ಯಾಯ ಆದರೆ ಸಹಿಸುವುದಿಲ್ಲ ಎಂದು ಹೇಳಿದರು. ಮುಂದಿನ ತಿಂಗಳು ಕಾರ್ಯಕರ್ತರ ಸಮಾವೇಶ ಮಾಡಿ ಪಕ್ಷ ಸಂಘಟನೆಗೆ ಹುರುಪು ನೀಡಲಾಗುವುದು ಎಂದರು.

ನಿರ್ಗಮನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ,
ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ಬ್ಲಾಕ್ ಉಸ್ತುವಾರಿ ಎಂ.ಎಸ್.ಮಹಮ್ಮದ್ ಮಾತನಾಡಿದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕಾಂಗ್ರೆಸ್ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ದ.ಕ.ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಸುಳ್ಯ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಸ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಕಾಂಗ್ರೆಸ್ ಮುಖಂಡರಾದ ಶುಭಾಶ್ಚಂದ್ರ ಕೋಳ್ನಾಡ್, ಜೋಕಿಂ ಡಿಸೋಜಾ, ಚಿತ್ತರಂಜನ್, ಪಿ.ಪಿ.ವರ್ಗೀಸ್,ಕೆ.ಪಿ.ಜಾನಿ, ಶಾಫಿ ಕುತ್ತಮೊಟ್ಟೆ, ಸರಸ್ವತಿ ಕಾಮತ್, ಇಸ್ಮಾಯಿಲ್ ಪಡ್ಪಿನಂಗಡಿ, ಸುರೇಶ್ ಎಂ.ಎಚ್, ಮಹೇಶ್ ಬೆಳ್ಳಾರ್ಕರ್, ಮಂಜುನಾಥ ಮಡ್ತಿಲ, ಜಯಪ್ರಕಾಶ್ ನೆಕ್ರಪ್ಪಾಡಿ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಸಂಶುದ್ದೀನ್, ಎನ್ಎಸ್ಯುಐ ಅಧ್ಯಕ್ಷ ಧನುಷ್ ಕುಕ್ಕೇಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ಸ್ವಾಗತಿಸಿ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ವಂದಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು.




