ಸುಳ್ಯ:ಸುಳ್ಯದ ರಂಗಮಯೂರಿ ಕಲಾಶಾಲೆಯ ವತಿಯಿಂದ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’ಕ್ಕೆ ಢ.13ರಂದು ಚಾಲನೆ ದೊರೆತಿದೆ. ಸುಳ್ಯ ಕಾಯರ್ತೋಡಿಯಲ್ಲಿ ಶಿಬಿರ ಆರಂಭಗೊಂಡಿದ್ದು ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಸನ್ನಿಧಿಯಲ್ಲಿ ಇನ್ನು 9 ದಿನಗಳ ಕಾಲ ಮಕ್ಕಳ ಕಲವರ ಮೇಳೈಸಲಿದೆ. ರಂಗಮಯೂರಿಯ ರಾಜ್ಯ ಮಟ್ಟದ ರಂಗ ಶೈಲಿಯ ಮಕ್ಕಳ ಬೇಸಿಗೆ ಶಿಬಿರವನ್ನು
ಹಿರಿಯ ರಂಗ ನಿರ್ದೇಶಕ ಬಾಸುಮ ಕೊಡಗು ಅವರು ಬಿಳಿಯ ಹಾಳೆಯಲ್ಲಿ ಬಣ್ಣ ಬಳಿದು, ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ, ರಂಗ ಸಂಗೀತ ನಿರ್ದೇಶಕ ಮುರಳಿ ಶೃಂಗೇರಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ. ಟಿ ಭಾಗವಹಿಸಿದ್ದರು.

ರಂಗ ಮಯೂರಿ ಕಲಾ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿರ್ದೇಶಕರಾದ ಲೋಕೇಶ್ ಊರುಬೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸಿಂಚನ ಪುತ್ತಿಲ ವಂದಿಸಿದರು.
ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ರಂಗಶೈಲಿಯ ಶಿಬಿರ:
ಸುಳ್ಯದ ಸಾಂಸ್ಕೃತಿಕ ಕಲಾ ಶಾಲೆ ರಂಗಮಯೂರಿಯ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’. ಕಳೆದ ಹಲವು ವರ್ಷಗಳಿಂದ ಆಕರ್ಷಕ ಮತ್ತು ವೈವಿಧ್ಯಮಯ ಶಿಬಿರವಾಗಿ ಮೂಡಿ ಬರುತ್ತಿದ್ದು ಈ ಬಾರಿ ರಂಗಮಯೂರಿಯ ಬಣ್ಣದ ಲೋಕದಲ್ಲಿ ಹಲವು ವೈವಿಧ್ಯತೆಯ ಜೊತೆ ಹೊಸ ಕ್ರಿಯಾತ್ಮಕ ಯೋಜನೆಯೊಂದಿಗೆ ಶಿಬಿರ ಮೂಡಿಬರಲಿದೆ.
ಈ ಬಾರಿಯ ಶಿಬಿರದಲ್ಲಿ ದೇಸೀಯ ಕಲೆಗಳ ಅನಾವರಣದೊಂದಿಗೆ

ಹಲವು ಶೈಲಿಯ ರಂಗ ತರಬೇತಿ ನೀಡಲಾಗುವುದು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಶೈಲೀಕೃತ ನಾಟಕಗಳ ಕಲಿಕೆ, ಪ್ರದರ್ಶನ, ಜನಪದ ಹಾಡು, ನೃತ್ಯ, ದೇಸೀ ಆಟ, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಇತ್ಯಾದಿ ವಿಭಿನ್ನ ಚಟುವಟಿಕೆಗಳ ಜೊತೆಗೆ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ ಎಂದು ರಂಗಮಯೂರಿಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.
















