ಸುಳ್ಯ: ಸುಳ್ಯ ಶ್ರೀರಾಮ ಪೇಟೆಯ ಶ್ರೀರಾಮ ಮಂದಿರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸುಳ್ಯ ನಗರದಲ್ಲಿ ಭಕ್ತಿ ಸಂಭ್ರಮದ ಭಜನಾ ಮೆರವಣಿಗೆ ನಡೆಯಿತು.ಸಂಜೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಹೊರಟ ಮೆರವಣಿಗೆ ಗಾಂಧಿನಗರದವರೆಗೆ ಸಾಗಿ ಬಳಿಕ ಮುಖ್ಯ ರಸ್ತೆಯಲ್ಲಿ ಸಾಗಿ ಬಂದು ಶ್ರೀರಾಮ ಭಜನಾ ಮಂದಿರದಲ್ಲಿ
ಸಮಾಪನಗೊಂಡಿತು. ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಆಕರ್ಷಕ ಕುಣಿತ ಭಜನೆಯೊಂದಿಗೆ ಅದ್ದೂರಿ ಭಜನಾ ಮೆರವಣಿಗೆ ನಡೆಯಿತು. ಚೆಂಡೆ ವಾದ್ಯ ಮೇಳಗಳು ಮೆರವಣಿಗೆಗೆ ಸಾಥ್ ನೀಡಿದವು. ಮಕ್ಕಳ ತಂಡಗಳು ಸೇರಿದಂತೆ ವಿವಿಧ ಭಜನಾ ತಂಡಗಳ ಆಕರತಷಕ ಕುಣಿತ ಭಜನೆ, ಭಜನಾ ಸಂಕೀರ್ತನೆ ನಗರದಲ್ಲಿ ಭಕ್ತಿ ಸಂಭ್ರಮದ ಅಲೆಯೆಬ್ಬಿಸಿತು.
ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್, ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ಮತ್ತಿತತರು ಸೇರಿ ಪ್ರಾರ್ಥನೆ ನಡೆಸಿ ಮೆರವಣಿಗೆಗೆ ಚಾಲನೆ ನೀಡಿದರು. ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರದ್ವಾಜ್, ಪ್ರಮುಖರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಸಂತೋಷ್ ಜಾಕೆ, ಕೆ.ಗೋಕುಲ್ದಾಸ್, ಸಂತೋಷ್ ಕುತ್ತಮೊಟ್ಟೆ,
ಸೇರಿದಂತೆ ನೂರಾರು ಮಂದಿ ಮೆವಣಿಗೆಯಲ್ಲಿ ಪಾಲ್ಗೊಂಡರು.ಬ್ರಹ್ಮ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಧರ್ಮದರ್ಶಿ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀರಾಮ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.