ಸುಳ್ಯ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರುಗೊಂಡಿದ್ದು ಸುಳ್ಯ ತಾಲೂಕಿನ 25 ಗ್ರಾಮಗಳಿಗೂ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಆಗಲಿದೆ. ಈ ಮೂಲಕ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜಾಗಲಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಶಾಸಕರ ಕಚೇರಿಯಲ್ಲಿ ಪತ್ರಕರ್ತರಿಗೆ ಈ ಕುರಿತು ಮಾಹಿತಿ ನೀಡಿದರು. ಯೋಜನೆಯ ಕುರಿತು
ವಿವರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಸಹಾಯಕ ಇಂಜಿನಿಯರ್ ಮಣಿಕಂಟ ಮಾತನಾಡಿ
‘ಸುಳ್ಯ ತಾಲೂಕಿನ 25 ಗ್ರಾಮ ಸೇರಿ ಕಡಬ, ಪುತ್ತೂರು ಬಂಟ್ವಾಳ ತಾಲೂಕುಗಳ ಒಟ್ಟು 56 ಗ್ರಾಮ ಪಂಚಾಯತ್ಗಳಿಗೆ ಯೋಜನೆ ಅನುಷ್ಠಾನ ಆಗಲಿದೆ. ಯೋಜನೆಗೆ 760 ಕೋಟಿ ಮಂಜೂರಾಗಿದ್ದು 600 ಕೋಟಿ ರೂಗಳಿಗೆ ಟೆಂಡರ್ ಆಗಿದೆ. ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿದ ಡ್ಯಾಂಗಳಿಂದ ನೀರು ಪಂಪ್ ಮಾಡಿ ಟ್ಯಾಂಕ್ಗಳಿಂದ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಸುಳ್ಯ ತಾಲೂಕಿನಲ್ಲಿ
ಎಂಟು ಕಡೆಗಳಲ್ಲಿ ಬೃಹತ್ ಟ್ಯಾಂಕ್ಗಳು ನಿರ್ಮಾಣವಾಗಲಿದ್ದು ಅವುಗಳಿಂದ ಪಂಚಾಯತ್ಗಳ ಟ್ಯಾಂಕರ್ಗಳಿಗೆ ನೀರು ಸರಬರಾಜಾಗಲಿದೆ. ಅಮರಮುಡ್ನೂರು, ಶೇಣಿ, ಪಂಬೆತ್ತಾಡಿ, ಮಂಡೆಕೋಲು, ಎಣ್ಮೂರು, ಬಳ್ಪಗಳಲ್ಲಿ ಒಂದೊಂದು ಹಾಗೂ ರಂಗತ್ತಮಲೆಯಲ್ಲಿ ಎರಡು ಟ್ಯಾಂಕ್ನ ನಿರ್ಮಾಣ ನಡೆಯಲಿದೆ. ಟ್ಯಾಂಕ್ಗಳ ನಿರ್ಮಾಣ ಹಾಗೂ ಪೈಪ್ ಲೈನ್ಗಳ ಕಾಮಗಾರಿ ನಟೆಯುತಿದೆ. 50 ಸಾವಿರ ಲೀಟರ್ಗಳಿಂದ 3 ಲಕ್ಷದವರೆಗಿನ ಟ್ಯಾಂಕ್ಗಳು ನಿರ್ಮಾಣವಾಗಲಿದೆ. ಈ ಟ್ಯಾಂಕರ್ಗಳಿಂದ
ಗ್ರಾಮ ಪಂಚಾಯತ್ನ ಟ್ಯಾಂಕರ್ಗಳಿಗೆ ಗ್ರ್ಯಾವಿಟಿ ಆಧಾರದಲ್ಲಿ ನೀರು ಹರಿಯಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಸಹಾಯಕ ಇಂಜಿನಿಯರ್ ಮಣಿಕಂಟ ಅವರು ವಿವರಿಸಿದರು.
“ಬಹುಗ್ರಾಮ ಕುಡಿಯುವ ಯೋಜನೆಯ ಟ್ಯಾಂಕ್ ನಿರ್ಮಾಣ ಮತ್ತಿತರ ಕಡೆಗಳಲ್ಲಿ ಭೇಟಿ ನೀಡಿ ಯೋಜನೆಯ ಬಗ್ಗೆ ತಿಳಿದು ಕೊಳ್ಳಲಾಗಿದೆ. ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.‘