ಹೊಸದಿಲ್ಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಆಸ್ಟ್ರೇಲಿಯ 309 ರನ್ ಗಳ ಬೃಹತ್ ಅಂತರದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 399 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಕಠಿಣ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ ತಂಡ 21 ಓವರ್ಗಳಲ್ಲಿ 90 ರನ್ಗೆ
ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಆಡಂ ಸಂಪಾ 4 ಹಾಗೂ ಮಿಚೆಲ್ ಮಾರ್ಷ್ 2 ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 40 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ, ವಿಶ್ವಕಪ್ ನಲ್ಲಿ ಅತೀ ವೇಗದ ಶತಕ ದಾಖಲಿಸಿದ ಸಾಧನೆ ಮಾಡಿದರು. ಮ್ಯಾಕ್ಸ್ವೆಲ್ 44 ಎಸೆತಗಳಲ್ಲಿ 8 ಸಿಕ್ಸರ್, 9 ಬೌಂಡರಿಗಳೊಂದಿಗೆ 106 ರನ್ ಗಳಿಸಿದರು. ಬೌಂಡರಿ, ಸಿಕ್ಸರ್ ಸುರಿಮಳೆಗೈದ ಮ್ಯಾಕ್ಸ್ವೆಲ್ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 93 ಎಸೆತಗಳಲ್ಲಿ 11ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 104 ರನ್ ಗಳಿಸಿದರು. ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಬುನೇಶ್ ಅರ್ಧ ಶತಕ ಸಿಡಿಸಿದರು. ಸ್ಮಿತ್ 68 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದವ 71 ರನ್ ಗಳಿಸಿದರೆ,ಲಬುನೇಶ್ 47 ಎಸೆತಗಳಲ್ಲಿ 7 ಬೌಂಡರಿ ಜಾಗೂ 2 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರು.