ಗುವಾಹಟಿ: ಬೃಹತ್ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ರೋಚಕ ಜಯ ದಾಖಲಿಸಿದೆ. ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಆಸೀಸ್ 5 ವಿಕೆಟ್ ಜಯ ದಾಖಲಿಸಿತು. ಮೊದಲ ಎರಡು ಪಂದ್ಯ ಗೆದ್ದಿದ್ದ ಭಾರತ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ಎಂಬ ನೆಲೆಯಲ್ಲಿ ಮುನ್ನಡೆಯಲ್ಲಿದೆ. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ
222 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಕೊನೆಯ ಓವರ್ನಲ್ಲಿ ಆಸೀಸ್ ಗೆಲುವಿಗೆ 21 ರನ್ ಅಗತ್ಯ ಇತ್ತು.
ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್ನಲ್ಲಿ ಆಸೀಸ್ ಬ್ಯಾಟರ್ಗಳು 4 ಬೌಂಡರಿ, ಒಂದು ಸಿಕ್ಸರ್ ಸಹೀತ 23 ರನ್ ಚಚ್ಚಿದರು. ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್ವೆಲ್ ಸ್ಪೋಟಕ ಶತಕ ಸಿಡಿಸಿದರು. ಕೇವಲ 48 ಎಸೆತಗಳಲ್ಲಿ ತಲಾ 8 ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ ಅಜೇಯ 104 ರನ್ ಗಳಿಸಿದ ಮ್ಯಾಕ್ಸ್ವೆಲ್ ಗೆಲುವಿನ ರುವಾರಿಯಾದರು. ಟ್ರಾವಿಸ್ ಹೆಡ್ 18 ಎಸೆತಗಳಲ್ಲಿ 8 ಬೌಂಡರಿ ಸಹೀತ 35, ಮ್ಯಾತ್ಯೂ ವೇಡ್ 16 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ28 ರನ್ ಗಳಿಸಿದರು. ಭಾರತದ ಎಲ್ಲಾ ಬೌಲರ್ಗಳು ದುಬಾರಿಯಾದರು. ಪ್ರಸಿದ್ದ ಕೃಷ್ಣ 4 ಓವರ್ಗಳಲ್ಲಿ 68 ರನ್ ನೀಡಿದರು. ಮೊದಲು ಬ್ಯಾಟ್ ಮಾಡಿದ
ಭಾರತ 20 ಔವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ 13 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 123 ರನ್ ಗಳಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿದರು. ತಿಲಕ್ ವರ್ಮಾ 24 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ ಅಜೇಯ 31ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್( 6), ಇಸಾನ್ ಕಿಸನ್(0) ಬೇಗನೇ ಔಟ್ ಆದರು.












